ಗುರುವಾರ , ಅಕ್ಟೋಬರ್ 17, 2019
22 °C
ತಾಂಬಾದಿಂದ ತುಳಜಾಪುರದತ್ತ ಹೊರಟ ಗ್ರಾಮಸ್ಥರು

ತುಳಜಾ ಭವಾನಿ ದರ್ಶನ; ಭಕ್ತರ ಪಾದಯಾತ್ರೆ

Published:
Updated:
Prajavani

ತಾಂಬಾ: ಸೀಗಿ ಹುಣ್ಣಿಮೆ ದಿನ ತುಳಜಾಪುರದ ಅಂಬಾಭವಾನಿ ದರ್ಶನಕ್ಕಾಗಿ ಅಪಾರ ಭಕ್ತ ಸಮೂಹ ಮಹಾರಾಷ್ಟ್ರದ ತುಳಜಾಪುರಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ.

ಸೀಗಿ ಹುಣ್ಣಿಮೆ ಬಂದರೆ ಸಾಕು ಅಂಬಾಭವಾನಿಯ ಭಕ್ತರಿಗೆ ಸಂಭ್ರಮಮೋ ಸಂಭ್ರಮ. ತಗ್ಗು- ದಿನ್ನಿ ರಸ್ತೆಯಲ್ಲಿ ಭಕ್ತಿ ಪರವಶರಾಗಿ ಅಂಬಾಭವಾನಿಯ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಹಜ್ಜೆ ಹಾಕುತ್ತಾರೆ.

ತಾಂಬಾ, ಬಂಥನಾಳ, ವಾಡೆ, ಗೂಗಿಹಾಳ, ಸುರಗಿಹಳ್ಳಿ, ತಾಂಬಾ ತಾಂಡಾ, ಬನ್ನಹಟ್ಟಿ, ಗೋರನಾಳ, ತೆನ್ನಿಹಳ್ಳಿ, ಮಸಳಿ, ಸಂಗೋಗಿ, ಹಿಟ್ನಳ್ಳಿ, ಚಿಕ್ಕರೂಗಿ, ಗಂಗನಳ್ಳಿ, ಹಿಟ್ನಳ್ಳಿ ಸೇರಿದಂತೆ ವಿವಿಧ ಗ್ರಾಮಗಳು ಜನರು ಅಂಬಾಭವಾನಿ ದರ್ಶನ ಪಡೆಯಲು, ಭಕ್ತಿ ಸಮರ್ಪಣೆಗಾಗಿ ಅಹೋರಾತ್ರಿ ಪಾದಯಾತ್ರೆ ಮೂಲಕ ತೆರಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ನಾಡಿನ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ದೇವಿಗೆ ಕರ್ನಾಟಕದಲ್ಲೂ ಅಪಾರ ಭಕ್ತರಿದ್ದಾರೆ. ಮನೆಯಲ್ಲಿ ಶುಭ ಕಾರ್ಯಗಳಾದರೆ ತುಳಜಾಪುರಕ್ಕೆ ತೆರಳಿ ಹರಕೆ ತೀರಿಸುವುದು ಈ ಭಾಗದ ಭಕ್ತರ ರೂಢಿ. ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಮನೆಗೆ ಒಬ್ಬರಾದರೂ ತೆರಳಿ ದೇವಸ್ಥಾನದ ದೀಪಗಳಿಗೆ ಎಣ್ಣೆ ಸಮರ್ಪಿಸಿ ಬರುವುದು ಸಂಪ್ರದಾಯ.

ಬಡವರು, ಶ್ರೀಮಂತರು ಎನ್ನದೆ, ಜಾತಿ-ಮತ, ಪಂಥ ಬೇಧವಿಲ್ಲದೆ, ಎಲ್ಲ ವರ್ಗಗಳ ಜನರ ಅಂಬಾಭವಾನಿ ದರ್ಶನಕ್ಕಾಗಿ ಕಾಯುತ್ತಾರೆ. ಪಾದಯಾತ್ರೆ ಮೂಲಕ ತುಳಜಾಪುರಕ್ಕೆ ತೆರಳಿ ದೇವಿಯ ದರ್ಶನ ಪಡೆದರೆ, ದೇವಿ ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು.

ಈ ಹಿಂದೆ ಯಾರಾದರೂ ಯಾತ್ರಿಕರು, ಒಂದು ಊರಿನ ಮಾರ್ಗವಾಗಿ ಪ್ರಯಾಣಿಸುತ್ತಿದ್ದರೆ, ಅಂತಹವರಿಗಾಗಿಯೇ ಊರಿನ ಅಗಸಿ ಬಾಗಿಲಿನಲ್ಲಿ ಕಾದು ಕುಳಿತವರು ‘ನಮ್ಮ ಮನೆಗೆ ಬನ್ನಿ’ ದಣಿವಾರಿಸಿಕೊಂಡು, ನಮ್ಮ ಅತಿಥ್ಯ ಸ್ವೀಕರಿಸಿ ಮುಂದೆ ಹೋಗಿ’ ಎಂದು ಕೈಮುಗಿದು ವಿನಂತಿಸಿಕೊಳ್ಳುತ್ತಿದ್ದರು. ಯಾತ್ರಿಕರು ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ, ಶುಭಕೋರಿ ಮುನ್ನಡೆಯುತ್ತಿದ್ದರು.

ಇದೇ ಮಾದರಿಯ ಆತಿಥ್ಯವನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ. ಅಂಬಾಭವಾನಿ ದರ್ಶನಕ್ಕೆ ತೆರಳುವ ಪಾದಯಾತ್ರಿಗಳನ್ನು ಆಹ್ವಾನಿಸಿ, ಶುದ್ಧ ಮನಸ್ಸಿನಿಂದ ಸತ್ಕರಿಸಿ, ಅವರಲ್ಲಿ ದೈವತ್ವ ಕಾಣುವ ಜನತೆಗೆ ಇಂದಿಗೂ ಈ ಭಾಗದಲ್ಲಿ ಬರವಿಲ್ಲ. ಒಮ್ಮೆ ಈ ಮಾರ್ಗದಲ್ಲಿ ಸಂಚರಿಸಿದರೆ ಆತಿಥ್ಯವನ್ನು ಕಾಣಬಹುದಾಗಿದೆ.

Post Comments (+)