ಗುರುವಾರ , ನವೆಂಬರ್ 21, 2019
22 °C
ಆಲಮೇಲ ಪಟ್ಟಣ ಪಂಚಾಯಿತಿ; ನ್ಯಾಯಾಲದಲ್ಲಿ ತಡೆಯಾಜ್ಞೆ

‌ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಪರದಾಟ

Published:
Updated:
Prajavani

ಆಲಮೇಲ: 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಆಲಮೇಲ ಪಟ್ಟಣ ಮೊದಲು ಗ್ರಾಮ ಪಂಚಾಯಿತಿ ಆಗಿತ್ತು. ಆಗ 37 ಜನ ಸದಸ್ಯರ ಬಲ ಹೊಂದಿದ ಈ ಗ್ರಾಮ ಪಂಚಾಯತಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಗ್ರಾಮ ಪಂಚಾಯಿತಿಯಾಗಿತ್ತು.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು 2016ರಲ್ಲಿ ಈ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೇಗೇರಿಸಿ ಪಟ್ಟಣ ಪಂಚಾಯಿತಿ ಎಂದು ಘೋಷಣೆ ಮಾಡಿದ್ದರು. ಪಟ್ಟಣ ಪಂಚಾಯಿತಿ ಘೋಷಣೆ ಬಳಿಕ 2016ರ ಏಪ್ರಿಲ್‌ 24ರಂದು ಚುನಾವಣೆ ನಡೆದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

19 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 11 ಬಿಜೆಪಿ, 7 ಕಾಗ್ರೆಸ್‌ ಮತ್ತು 1 ಪಕ್ಷೇತರ ಸದಸ್ಯರು ಇದ್ದಾರೆ. 2016ರಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ವರ್ಷ ಅಧ್ಯಕ್ಷರಾಗಿ ವಿದ್ಯಾವತಿ ಪ್ರದೀಪ ಗೌರ, ಉಪಾಧ್ಯಕ್ಷರಾಗಿ ರಾಜಕುಮಾರ ತಡಕಲ್ ತಮ್ಮ ಎರಡೂವರೆ ವರ್ಷ ಅವಧಿಯನ್ನು ಪೊರೈಸಿದರು. ಇವರ ಅವಧಿ 2018ರ ಡಿಸೆಂಬರ್‌ 6ಕ್ಕೆ ಮುಕ್ತಾಯವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸುಮಾರು ಹತ್ತು ತಿಂಗಳು ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದ ಕಾರಣ ಯಾವುದೇ ಸಭೆ, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.

ಸಭೆ ಇಲ್ಲ: ‘ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸರ್ಕಾರದ ಬೇಜವಾಬ್ದಾರಿ, ಸ್ಥಳೀಯ ಸಂಸ್ಥೆಗಳ ಬಗ್ಗೆ ನಿಷ್ಕಾಳಜಿ ವಹಿಸಿದ್ದರಿಂದ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಸದ್ಯ ಸಿಂದಗಿ ತಹಶೀಲ್ದಾರ್‌ ಆಡಳಿತ ಅಧಿಕಾರಿಯಾಗಿದ್ದಾರೆ. ಇದುವರೆಗೂ ಒಮ್ಮೆಯೂ ಅವರು ಭೇಟಿ ನೀಡಿಲ್ಲ. ಒಂದೇ ಒಂದು ಸಾಮಾನ್ಯ ಸಭೆಯನ್ನೂ ನಡೆಸಿಲ್ಲ’ ಎಂದು ನಾಗರಿಕ ಸಮಿತಿ ಅಧ್ಯಕ್ಷ ರಮೇಶ ಭಂಟನೂರ ಆರೋಪಿಸುತ್ತಾರೆ.

‘ಪಟ್ಟಣದಲ್ಲಿ ಕುಡಿಯುವ ನೀರು, ಚರಂಡಿ ಇತರ ಸಾಕಷ್ಟು ಸಮಸ್ಯೆಗಳು ಇದ್ದರೂ ಇದುವರೆಗೂ ಅಧಿಕಾರಿಗಳು ಸದಸ್ಯರ ಸಭೆ ನಡೆಸಿಲ್ಲ. ಪಟ್ಟಣ ಪಂಚಾಯಿತಿ ಆದ ಬಳಿಕ ಅಭಿವೃದ್ಧಿ ಆಗಬಹುದು ಎಂದು ಭಾವಿಸಿದ್ದ ನಮಗೆ ನಿರಾಸೆಯಾಗಿದೆ’ ಎಂದು ದೂರಿದರು.

ಪ್ರತಿಕ್ರಿಯಿಸಿ (+)