ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ–ವಿಜಯಪುರ ನೇರ ರೈಲು: ಪ್ರಯಾಣಿಕರಲ್ಲಿ ಹರ್ಷ

ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು
Last Updated 26 ಅಕ್ಟೋಬರ್ 2019, 8:40 IST
ಅಕ್ಷರ ಗಾತ್ರ

ವಿಜಯಪುರ: ತಮ್ಮೂರಿಗೆ ನೇರ ರೈಲು ಸೇವೆ ಆರಂಭವಾದ ಸಂತಸ ಒಂದೆಡೆ.. ಸೀಟುಗಳು ಸುಲಭವಾಗಿ ಸಿಗುತ್ತವೆ ಎಂಬ ಖುಷಿ ಇನ್ನೊಂದೆಡೆ.. ನೂತನ ರೈಲು ಸೇವೆಯಿಂದ ಬೆಂಗಳೂರಿಗೆ ಆರಾಮವಾಗಿ ಹೋಗಿ ಬರಬಹುದು ಎಂಬ ಸಂತಸ ಮತ್ತೊಂದೆಡೆ..

ಇವು ಯಶವಂತಪುರ–ವಿಜಯಪುರ ನೂತನ ರೈಲಿನಲ್ಲಿ ಗುರುವಾರ ಬೆಳಿಗ್ಗೆ ಇಲ್ಲಿನ ರೈಲು ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರ ಮೊಗದಲ್ಲಿ ಕಂಡು ಬಂದ ಭಾವನೆಗಳು.

ಈ ಹಿಂದೆ ಸೊಲ್ಲಾಪುರ–ಮೈಸೂರು (ಗೋಲಗುಂಬಜ್ ಎಕ್ಸ್‌ಪ್ರೆಸ್) ಮತ್ತು ಬಾಗಲಕೋಟೆ–ಮೈಸೂರು (ಬಸವ ಎಕ್ಸ್‌ಪ್ರೆಸ್) ಎರಡು ರೈಲುಗಳ ಸೇವೆ ಮಾತ್ರ ಲಭ್ಯವಿತ್ತು. ಈ ಎರಡೂ ರೈಲುಗಳು ಸೊಲ್ಲಾಪುರ ಮತ್ತು ಬಾಗಲಕೋಟೆಯಿಂದ ಹೊರಟು ವಿಜಯಪುರ ಮಾರ್ಗವಾಗಿ ಬೆಂಗಳೂರು ತಲುಪುತ್ತಿದ್ದ ಕಾರಣ ಜಿಲ್ಲೆಯ ಪ್ರಯಾಣಿಕರಿಗೆ ಸೀಟುಗಳು ಸಿಗುತ್ತಿರಲಿಲ್ಲ. ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರೆ ಮಾತ್ರ ಅನುಕೂಲ, ಇಲ್ಲವಾದರೆ ಇಲ್ಲ ಎಂಬಂತಹ ಸ್ಥಿತಿ ಇತ್ತು. ಆದರೆ, ಈಗ ವಿಜಯಪುರ–ಯಶವಂತಪುರ (ಗಾ.ಸಂ: 06451) ನೇರ ರೈಲು ಸೇವೆ ಆರಂಭವಾಗಿದ್ದರಿಂದ ಜಿಲ್ಲೆಯ ಜನರು ಖುಷಿಯಾಗಿದ್ದಾರೆ.

ಬೆಂಗಳೂರಿನಿಂದ ಅ.23ರಂದು ನಿಗದಿತ ಸಮಯದಂತೆ ಸಂಜೆ 5.45 ಗಂಟೆಗೆ ಹೊರಟ ಈ ರೈಲು ಬೆಳಿಗ್ಗೆ ಒಂದೂವರೆ ಗಂಟೆ ವಿಳಂಬವಾಗಿ, ಅಂದರೆ 10 ಗಂಟೆಗೆ ವಿಜಯಪುರ ರೈಲು ನಿಲ್ದಾಣ ತಲುಪಿತು. ರೈಲಿನಿಂದ ಇಳಿದ ಪ್ರಯಾಣಿಕರು ಲಘುಬಗೆಯಿಂದ ತಮ್ಮ ಲಗೇಜುಗಳೊಂದಿಗೆ ಮನೆಗಳತ್ತ ಹೆಜ್ಜೆ ಹಾಕಿದರು.

ಈ ಕುರಿತು ಪ್ರಯಾಣಿಕರನ್ನು ಮಾತನಾಡಿಸಿದಾಗ, ‘ಹೊಸ ರೈಲು ಆರಂಭಿಸಿದ್ದು ಒಳ್ಳೆಯದಾಗಿದೆ. ನಮ್ಮೂರಿನಿಂದ ನೇರ ರೈಲು ಸೇವೆ ದೊರಕಿರುವುದು ಸಂತಸ ತಂದಿದೆ. ವಿಜಯಪುರದಿಂದ ಹೊರಡುವ ಸಮಯವನ್ನು ಬದಲಾಯಿಸಬೇಕು’ ಎಂದು ಹೇಳಿದರು.

‘ಮಗಳನ್ನು ಭೇಟಿಯಾಗಲು ಬೆಂಗಳೂರಿಗೆ ಹೋಗಿದ್ದೆ. ವಾಪಸು ಬರುವಾಗ ಹೊಸ ರೈಲು ಆರಂಭವಾಗಿರುವ ವಿಷಯ ತಿಳಿದು ಖುಷಿಯಾಯಿತು’ ಎಂದು ಜಯಶ್ರೀ ಬಿರಾದಾರ ಸಂತಸ ಹಂಚಿಕೊಂಡರು.

‘ಮೊದಲ ದಿನ ಬೆಂಗಳೂರಿಗೆ ಹೊರಟ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಬೆಂಗಳೂರಿನಿಂದ ಇಲ್ಲಿಗೆ ಬಹುತೇಕ ಭರ್ತಿಯಾಗಿ ಬಂದಿದೆ. ಇನ್ನೊಂದು ವಾರ ಹೋದರೆ ಸೀಟು ಸಿಗುವುದು ಕಷ್ಟ ಎಂಬಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಸದ್ಯ ಪ್ರಯೋಗಾರ್ಥ ಚಾಲನೆ ನಡೆಯುತ್ತಿದ್ದು, ಎರಡು ತಿಂಗಳ ಬಳಿಕ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿ ಸಮಯವನ್ನು ಬದಲಾಯಿಸುವ ಬಗ್ಗೆ ತೀರ್ಮಾನನಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನೂತನ ರೈಲು ವಿಜಯಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮಾರನೇ ದಿನ ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 5.45 ಗಂಟೆಗೆ ಹೊರಟು, ಮಾರನೇ ದಿನ ಬೆಳಿಗ್ಗೆ 8.30 ಗಂಟೆಗೆ ವಿಜಯಪುರ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT