ಭಾನುವಾರ, ನವೆಂಬರ್ 17, 2019
29 °C
ಡಾಂಬರೀಕರಣ, ನಾಮಫಲಕ ಇಲ್ಲ; ಎಲ್ಲೆಡೆ ದೂಳು

ಅವ್ಯವಸ್ಥೆಯ ತಾಣ: ಬಸ್ ನಿಲ್ದಾಣ

Published:
Updated:
Prajavani

ದೇವರಹಿಪ್ಪರಗಿ: ಡಾಂಬರು ಕಾಣದ ಆವರಣ. ಎಲ್ಲೆಂದರಲ್ಲಿ ನಿಲ್ಲುವ ಬಸ್‌ಗಳು, ಗೋಚರಿಸದ ಬಸ್ ವೇಳಾಪಟ್ಟಿ, ನಿಲುಗಡೆ ಫಲಕಗಳು..

-ಇವು ದೇವರ ಹಿಪ್ಪರಗಿ ಬಸ್ ನಿಲ್ದಾಣದ ಆವರಣದಲ್ಲಿ ಕಂಡು ಬರುವ ದೃಶ್ಯಗಳು. ಈ ಬಸ್ ನಿಲ್ದಾಣ ಹಲವು ಇಲ್ಲಗಳ ತಾಣವಾಗಿದೆ.

ತಾಲ್ಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಹತ್ತಿರದಲ್ಲಿಯೇ ಬಸ್ ನಿಲ್ದಾಣವಿದೆ. ಈ ರಸ್ತೆಯ ಮೂಲಕ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತಿವೆ. ಇದು ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಿಗೆ ನೇರ ಸಂಚಾರ ಕಲ್ಪಿಸುವ ಕೇಂದ್ರ ಸ್ಥಾನವಾಗಿದೆ. ಹೀಗಾಗಿ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಬೇಕಿತ್ತು. ಆದರೆ, ಸ್ಥಳೀಯರ ಹಾಗೂ ನಾಯಕರ ನಿರ್ಲಕ್ಷ್ಯದಿಂದಾಗಿ ಬಸ್ ನಿಲ್ದಾಣ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ.

‘ಬಸ್ ನಿಲ್ದಾಣದ ಆವರಣ ಡಾಂಬರು ಇಲ್ಲದ ಕಾರಣ ಕಲ್ಲುಗಳು ಎದ್ದು ದೂಳುಮಯವಾಗಿದೆ. ದೂಳು ಸೇವಿಸುತ್ತಲೇ ಅನಿವಾರ್ಯವಾಗಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರೂ ಇಲ್ಲಿ ಮಾತ್ರ ಅದು ಅನ್ವಯವಾಗಿಲ್ಲ. ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳಲ್ಲಿ ತ್ಯಾಜ್ಯ ವಸ್ತುಗಳು ತುಂಬಿಕೊಂಡಿದ್ದು, ಹಂದಿಗಳು ಪರಿವಾರ ಸಮೇತ ಠಿಕಾಣಿ ಹೂಡಿ, ಎಲ್ಲೆಂದರಲ್ಲಿ ತಿರುಗಾಡುವುದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ’ ಎಂದು ‘ನಮ್ಮ ಮಕ್ಕಳ ಧಾಮ’ದ ನಿರ್ದೇಶಕ ವಾಸುದೇವ ತೋಳಬಂದಿ ಹಾಗೂ ಅಂಚೆ ಇಲಾಖೆಯ ವೆಂಕಟೇಶ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೈಯ್ಯಲ್ಲಿ ಕೈಚೀಲ ಹಿಡಿದುಕೊಂಡು ಬಂದರೆ ಸಾಕು, ಹಂದಿಗಳು ಕಸಿದುಕೊಂಡು ಹೋಗುತ್ತವೆ. ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಭಯ ಪಡುವಂತಾಗಿದೆ. ಜತೆಗೆ ಖಾಸಗಿ ವಾಹನಗಳನ್ನು ನಿಲ್ದಾಣದ ಆವರಣದಲ್ಲಿ ನಿಲ್ಲಿಸುವುದರಿಂದ ಬಸ್ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಸ್ ನಿಲ್ದಾಣದ ಆವರಣಕ್ಕೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು’ ಎಂದು ಪಟ್ಟಣದ ವೈದ್ಯರಾದ ಡಾ. ಆರ್.ಆರ್.ನಾಯಕ, ಡಾ.ಮಂಜುನಾಥ ಮಠ, ಡಾ.ಸುರೇಶ ಸಜ್ಜನ, ಡಾ. ಐ.ಎಸ್. ಹಿರೇಮಠ, ರಾವುತ ಅಗಸರ, ಅಬೂಬಕರ್ ಕಲಕೇರಿ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)