ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.26 ಲಕ್ಷ ಫಲಾನುಭವಿಗಳಿಗೆ ಎಲ್‌ಪಿಜಿ

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ವಿತರಣೆ
Last Updated 25 ಅಕ್ಟೋಬರ್ 2019, 14:39 IST
ಅಕ್ಷರ ಗಾತ್ರ

ವಿಜಯಪುರ: ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಜಿಲ್ಲೆಯಲ್ಲಿ 2019ರ ಸೆಪ್ಟೆಂಬರ್ 18ರವರೆಗೆ 1.26 ಲಕ್ಷ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.

ಈ ಪೈಕಿ ಬಸವನಬಾಗೇವಾಡಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ 38,232 ಹಾಗೂ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅತೀ ಕಡಿಮೆ ಅಂದರೆ 13,906 ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.

ಹೊಗೆರಹಿತ ಅಡುಗೆ ಮನೆ, ಮಹಿಳೆಯರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡ ಕೇಂದ್ರ ಸರ್ಕಾರವು 2011ರ ಸಮಾಜೋ–ಆರ್ಥಿಕ ಜಾತಿ ಜನಗಣತಿ ಆಧಾರದ ಮೇಲೆ 2016ರಿಂದ ಬಡ ಕುಟಂಬಗಳಿಗೆ ಎಲ್‌ಪಿಜಿ ಒದಗಿಸುತ್ತಿದೆ. ಈ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ವಿತರಿಸುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸರ್ಕಾರವು ತಲಾ ₹1,600 ಸಬ್ಸಿಡಿಯನ್ನು ನೀಡುತ್ತಿದೆ.

ದಾಖಲೆಗಳು ಏನಿರಬೇಕು?:

ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ಎರಡು ಭಾವಚಿತ್ರಗಳನ್ನು ಹೊಂದಿರಬೇಕು. ಎಲ್‌ಪಿಜಿ ಹಂಚಿಕೆದಾರರು ಅಥವಾ ಅಂತರ್ಜಾಲದಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ ಕೊಡಬೇಕು. ಬಿಪಿಎಲ್ ಕಾರ್ಡ್‌ ಹೊಂದಿರುವ ಎಲ್ಲರೂ ಈ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಪಡೆಯಬಹುದಾಗಿದೆ.

‘ಈ ಯೋಜನೆಯು ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಬಡ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ಈ ಯೋಜನೆಯಡಿ ಎಲ್ಲಾ ವರ್ಗದ (ಬಿಪಿಎಲ್ ಕಾರ್ಡ್‌ ಹೊಂದಿರುವವರು) ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕವನ್ನು ಒದಗಿಸಲಾಗುತ್ತದೆ. ಇದರಿಂದ ಮಹಿಳೆಯರು ಅನಾರೋಗ್ಯದಿಂದ ಬಳಲುವುದು, ಕಟ್ಟಿಗೆ, ಸೀಮೆ ಎಣ್ಣೆಗಾಗಿ ಅಲೆಯುವುದು ತಪ್ಪಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಗಳು ಹೇಳುತ್ತವೆ.

‘ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ಇಂದಿಗೂ ಕಟ್ಟಿಗೆ, ಇದ್ದಲಿ, ಕುಳ್ಳು (ಬೆರಣಿ) ಬಳಸಿಕೊಂಡು ಅಡುಗೆ ಮಾಡುತ್ತಿದ್ದಾರೆ. ಹೊಗೆಯಿಂದಾಗಿ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಇದನ್ನು ಅರಿತ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಇದುವರೆಗೆ 1.26 ಲಕ್ಷ ಫಲಾನುಭವಿಗಳಿಗೆ ಎಲ್‌ಪಿಜಿ ವಿತರಿಸಿರುವುದು ಉತ್ತಮ ಸಾಧನೆಯಾಗಿದೆ’ ಎಂಬುದು ಮೂಲಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT