ಗುರುವಾರ , ಡಿಸೆಂಬರ್ 5, 2019
21 °C
ಅನಗತ್ಯ ವಿದ್ಯುತ್ ಪೋಲು; ತೆರಿಗೆ ಹಣದಿಂದ ಬಿಲ್ ಪಾವತಿ

ದಿನವಿಡೀ ಉರಿಯುವ ಬೀದಿದೀಪ

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ದೇವರಹಿಪ್ಪರಗಿ: ಇಲ್ಲಿನ ಪಟ್ಟಣ ಪಂಚಾಯಿತಿಯು ವಿವಿಧ ಬಡಾವಣೆಗಳಲ್ಲಿ ದಿನಪೂರ್ತಿ ಬೀದಿ ದೀಪಗಳನ್ನು ಉರಿಸುವ ಮೂಲಕ ಅನಗತ್ಯವಾಗಿ ಹೆಸ್ಕಾಂಗೆ ಬಿಲ್ ಪಾವತಿಸುತ್ತಿದೆ.

‘ಸೋಲಾರ್ ಬಳಸಿ, ವಿದ್ಯುತ್ ಉಳಿಸಿ’, ‘ವಿದ್ಯುತ್ ಉಳಿತಾಯಕ್ಕಾಗಿ ಸುರಕ್ಷತಾ ಕ್ರಮಗಳು’ ಎಂಬ ಘೋಷಣೆಗಳ ಮೂಲಕ ಜನಜಾಗೃತಿ ಮೂಡಿಸುವ ಹೆಸ್ಕಾಂ, ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಶ್ರಮಿಸುತ್ತಿದೆ. ಆದರೆ, ಅದೇ ವಿದ್ಯುತ್ ಅನ್ನು ಪಟ್ಟಣ ಪಂಚಾಯಿತಿ ಸಮರ್ಪಕವಾಗಿ ಬಳಸದೇ ದಿನಪೂರ್ತಿ ಬೀದಿ ದೀಪಗಳನ್ನು ಉರಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ.

‘ಪಟ್ಟಣದಲ್ಲಿ ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್‌ ಸ್ಕೀಮ್ (ಐಪಿಡಿಎಸ್‌)ನಡಿ ₹1.42 ಕೋಟಿ ವೆಚ್ಚದಲ್ಲಿ ವಿದ್ಯುತ್ ಸುಧಾರಣಾ
ಕ್ರಮ
ಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಯಡಿ 14 ಟ್ರಾನ್ಸಫಾರ್ಮರ್‌ಗಳನ್ನು ನವೀಕರಿಸುವ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ 3 ಹೊಸ ಟ್ರಾನ್ಸಫಾರ್ಮರ್‌ ಗಳನ್ನು ಅಳವಡಿಸಲಾಗಿದೆ. ಮುಖ್ಯವಾಗಿ ಪಟ್ಟಣದಾದ್ಯಂತ 20 ವರ್ಷಗಳಿಗಿಂತ ಹಳೆಯದಾದ ವಿದ್ಯುತ್ ತಂತಿಯನ್ನು ಬದಲಾಯಿಸಿ, ಹೊಸ ತಂತಿಗಳನ್ನು ಜೋಡಿಸಲಾಗಿದೆ. ಶಿಥಿಲಗೊಂಡ ವಿದ್ಯುತ್ ಕಂಬಗಳನ್ನು ತೆಗೆಯಲಾಗಿದೆ. ಹೆಚ್ಚು ಅಂತರವಿರುವ ಕಂಬಗಳ ನಡುವೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ’ ಎಂದು ಹೆಸ್ಕಾಂ ಎಇಇ ಜಿ.ಎಸ್.ಅವುಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಳೆಯದಾಗಿರುವ ವಿದ್ಯುತ್ ಮೀಟರ್‌ಗಳನ್ನು ಬದಲಾಯಿಸಲಾಗು ತ್ತಿದ್ದು, ಗ್ರಾಹಕರ ಅನುಕೂಲ ಹಾಗೂ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ದಿನದ 24 ಗಂಟೆ ಉರಿಯುವ ಬೀದಿ ದೀಪಗಳ ನಿರ್ವಹಣೆ ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಅವರು ಆ ಬಗ್ಗೆ ಕ್ರಮ ಕೈಗೊಳ್ಳಬೇಕು. ನಮ್ಮ ಇಲಾಖೆ ನಿರಂತರ ವಿದ್ಯುತ್ ಪೂರೈ ಸುವ ಕಾರ್ಯವನ್ನು ಮಾಡುತ್ತದೆ. ಅದನ್ನು ಯಾವ ಸಮಯಕ್ಕೆ ಉಪಯೋಗಿ ಸಬೇಕು, ಬಿಡಬೇಕು ಎಂಬುದು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಸಂಬಂಧಿಸಿದೆ’ ಎಂದು ಹೇಳಿದರು.

‘ಪಟ್ಟಣದಲ್ಲಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೊಸ ಬಡಾವಣೆಗಳು ಸೇರಿದಂತೆ, ಬಸವನಗರ, ಇಂಡಿ ರಸ್ತೆಯ ಬಡಾವಣೆಗಳಲ್ಲಿನ ಬೀದಿ ದೀಪಗಳು ಎರಡು ವರ್ಷಗಳಿಂದ ಹಗಲುರಾತ್ರಿ ಉರಿಯುತ್ತಿವೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅವರು ಪಟ್ಟಣ ಪಂಚಾಯಿತಿ ನಿರ್ವಹಣೆ ಕುರಿತು ವಿವರಣೆ ನೀಡುತ್ತಾರೆ. ಆದರೆ, ಪಟ್ಟಣ ಪಂಚಾಯಿತಿ ಪಾತ್ರ ಈ ವಿಷಯದಲ್ಲಿ ಕೈಕಟ್ಟಿ ಕುಳಿತಿದೆ’ ಎಂದು ರಮೇಶ ಮಸಬಿನಾಳ ಹಾಗೂ ವೈದ್ಯ ಡಾ.ಮಂಜುನಾಥ ಮಠ ಆರೋಪಿಸುತ್ತಾರೆ.

‘ನಿರಂತರವಾಗಿ ವಿದ್ಯುತ್ ಪೋಲು ಮಾಡಿದರೆ ಬಿಲ್ ಭರಿಸುವವರು ಯಾರು. ಇಂಧನ ಇಲಾಖೆ ಹೊರರಾಜ್ಯಗಳಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸಿ ನಮಗೆ ಕಡಿಮೆ ದರದಲ್ಲಿ ಪೂರೈಸುತ್ತದೆ. ಆದ್ದರಿಂದ ಕೂಡಲೇ ಬೀದಿ ದೀಪಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಮೇಲಿನ ಅನಗತ್ಯ ತೆರಿಗೆ ಹೊರೆಯನ್ನು ತಪ್ಪಿಸಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಪ್ರತಿಕ್ರಿಯಿಸಿ (+)