ಸ್ವಂತ ಉದ್ಯೋಗ ಮಾಡಲು ಸಲಹೆ

7

ಸ್ವಂತ ಉದ್ಯೋಗ ಮಾಡಲು ಸಲಹೆ

Published:
Updated:
Deccan Herald

ಸಾತನೂರು (ಕನಕಪುರ): ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರಿಗೆ ಕೇವಲ ಸಾಲ ನೀಡಿದರೇ ಸಾಲದು. ಅವರನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡಬೇಕು ಎಂದು ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷೆ ಎಚ್‌.ಕೆ.ಶ್ರೀಕಂಠು ತಿಳಿಸಿದರು.

ತಾಲ್ಲೂಕಿನ ಸಾತನೂರು ಮಹದೇಶ್ವರ ದೇಗುಲದ ಆವರಣದಲ್ಲಿ ಮಹದೇಶ್ವರ ಸಮುದಾಯ ಭವನದಲ್ಲಿ ಕನಕಕಾಂಬರಿ ಮಹಿಳಾ ಒಕ್ಕೂಟದ ವತಿಯಿಂದ ‘ರಾಗಿ ಹಪ್ಪಳ ತಯಾರಿಕೆ ತರಬೇತಿ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ನಿರ್ಲಕ್ಷಕ್ಕೆ ಒಳಗಾಗಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯ ವಾಹಿನಿಗೆ ಬರಲು ವಿಪುಲ ಅವಕಾಶಗಳಿವೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಮಹಿಳೆಯರು ಅರಿತುಕೊಳ್ಳಬೇಕು ಎಂದರು.

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ, ಸಂಘ ಸಂಸ್ಥೆಗಳು ಶ್ರಮಿಸುತ್ತಿವೆ. ಸಂಸ್ಥೆಯೂ ಮನೆಯಲ್ಲಿಯೇ ಇದ್ದು ಹಣ ಗಳಿಸುವ ಉದ್ಯಮದ ಬಗ್ಗೆ ಕೌಶಲ ತರಬೇತಿ ನೀಡುತ್ತಿದ್ದು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

‘ನಾವೇ ಬೆಳೆದ ರಾಗಿಯಲ್ಲಿ ಹಪ್ಪಳ ಸೇರಿದಂತೆ ಅನೇಕ ತಿನಿಸು ಮಾಡಬಹುದು. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಬೆಳೆಯುವ ರಾಗಿಯಲ್ಲಿ ಪೌಷ್ಟಿಕಾಂಶವೂ ಹೆಚ್ಚಾಗಿರುತ್ತದೆ’ ಎಂದರು.

ರಾಗಿ ಹಪ್ಪಳ ತುಂಬಾ ಉತ್ಕೃಷ್ಟವಾಗಿರುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆಯಿದೆ ಎಂದು ತಿಳಿಸಿದರು.

ರಾಗಿ ಹಪ್ಪಳ ತಯಾರಿಕೆಯ ಬಗ್ಗೆ ತಿಳಿಸಿದ ಶಿಕ್ಷಕಿ ವಿಜಯಲಕ್ಷ್ಮೀಕುಮಾರಿ ಮಾತನಾಡಿ, 20 ವರ್ಷಗಳ ಹಿಂದೆ ರೇಡಿಯೋದಲ್ಲಿ ಪ್ರಸಾರವಾದ ರಾಗಿ ಹಪ್ಪಳ ತಯಾರಿಕೆಯನ್ನು ಕೇಳಿ ಕಲಿತೆ ಎಂದು ತಿಳಿಸಿದರು.

ಅಂದಿನಿಂದ ಇಂದಿನ ವರೆಗೂ ಮನೆಯಲ್ಲಿಯೇ ರಾಗಿ ಹಪ್ಪಳ ತಯಾರು ಮಾಡುತ್ತಿದ್ದು ಮುಂಬೈ ವರೆಗೂ ಮಾರಾಟವಾಗುತ್ತಿದೆ. ಇದರಿಂದ ಉತ್ತಮ ಹಣ ಸಿಗುತ್ತಿದೆ ಎಂದು  ಅನುಭವ ಹಂಚಿಕೊಂಡರು.

ಒಕ್ಕೂಟದ ಮಹಿಳೆಯರು ಸೇರಿದಂತೆ ಸುತ್ತಲಿನ ಗ್ರಾಮಗಳ 110 ಮಹಿಳೆಯರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ತರಬೇತಿ ಪಡೆದುಕೊಂಡರು.

ಕೃಷಿಕ ಹಲಸೂರು ನಟರಾಜು, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣ, ಅಧ್ಯಕ್ಷೆ ಪವಿತ್ರ, ನಿರ್ದೇಶಕಿಯರಾದ ರತ್ನಮ್ಮ, ಜೈಶೀಲ, ಕ್ಷೇತ್ರ ವ್ಯವಸ್ಥಾಪಕರಾದ ಶಾಂತಮ್ಮ, ಸುನಿತ, ಶಶಿಕಲ, ಹರಿಣಿ, ಚೂಡಲಿಂಗೇಗೌಡ, ನಾಗರಾಜು, ಪದ್ಮ, ಕಮಲ, ನಾಗಮ್ಮ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !