ಮುಷ್ಕರ ವಾಪಸ್‌; ತೆರಿಗೆ ಆಯುಕ್ತರ ಭೇಟಿ ನಾಳೆ

7

ಮುಷ್ಕರ ವಾಪಸ್‌; ತೆರಿಗೆ ಆಯುಕ್ತರ ಭೇಟಿ ನಾಳೆ

Published:
Updated:

ವಿಜಯಪುರ: ಕೇಂದ್ರ ಸರ್ಕಾರ 2017ರ ಜುಲೈ 1ರಿಂದ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಲ್ಲಿನ ನ್ಯೂನ್ಯತೆ ಸರಿಪಡಿಸಿ, ವರ್ತಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಇದೇ 23ರಿಂದ ಆರಂಭಿಸಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ಗುರುವಾರದಿಂದ ಕೈಬಿಡಲಾಗಿದೆ ಎಂದು ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರವೀಂದ್ರ ಬಿಜ್ಜರಗಿ ತಿಳಿಸಿದರು.

ಮುಷ್ಕರದ ಸ್ಥಳಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಬುಧವಾರ ಭೇಟಿ ನೀಡಿ, ನಮ್ಮ ಏಳು ಬೇಡಿಕೆ ಈಡೇರಿಸುವ ಸಂಬಂಧ ಕೇಂದ್ರ ಹಣಕಾಸು ಖಾತೆಯ ಸಚಿವರು, ಸಂಬಂಧಿಸಿದ ಕಾರ್ಯದರ್ಶಿಗಳು, ಜಿಎಸ್‌ಟಿ ಮಂಡಳಿಯ ಪ್ರತಿನಿಧಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದರಿಂದ, ವರ್ತಕ ಸಮೂಹ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಂತರ್ಜಾಲದಲ್ಲಿ ಜಿಎಸ್‌ಟಿಯ ಮಾಹಿತಿ ತುಂಬುವ ಸಂದರ್ಭ ಸಾಕಷ್ಟು ತಾಂತ್ರಿಕ ತೊಂದರೆ ಅನುಭವಿಸಲಾಗುತ್ತಿದೆ. ಕೆಲವೊಮ್ಮೆ ತೆರಿಗೆ ತುಂಬಿದ್ದರೂ ದಂಡ ಭರಿಸುವ ಸನ್ನಿವೇಶ ನಿರ್ಮಾಣಗೊಂಡಿದ್ದಿದೆ. ಈ ನ್ಯೂನ್ಯತೆ ಸರಿಪಡಿಸುವ ಭರವಸೆ ದೊರೆತಿರುವುದರಿಂದ’ ವಿವಿಧ ವ್ಯಾಪಾರಿ ಸಂಘಟನೆಗಳು ನಡೆಸುತ್ತಿದ್ದ ಮುಷ್ಕರ ಸ್ಥಗಿತಗೊಳಿಸುತ್ತಿದ್ದೇವೆ’ ಎಂದು ಬಿಜ್ಜರಗಿ ತಿಳಿಸಿದರು.

‘ರಾಜ್ಯದಲ್ಲಿನ ತೆರಿಗೆ ಆಯುಕ್ತರು ಸಹ ನಮ್ಮ ಮನವಿ ಪರಿಗಣಿಸಿದ್ದಾರೆ. ಇದೇ 30ರಂದು ಬೆಂಗಳೂರಿನಲ್ಲಿ ಭೇಟಿಯಾಗುವಂತೆ ಸಮಯ ನೀಡಿದ್ದಾರೆ. ವರ್ತಕ ಸಂಘದ ನಿಯೋಗ ತೆರಳಲಿದ್ದು, ಸಮಸ್ಯೆ ಪರಿಹಾರಕ್ಕಾಗಿ ಮನವಿ ನೀಡುವ ಜತೆ ಚರ್ಚೆ ನಡೆಸಲಾಗುವುದು’ ಎಂದು
ಹೇಳಿದರು.

ಮರ್ಚೆಂಟ್ಸ್‌ ಅಸೋಸಿಯೇಷನ್‌ನ ಉಪಾಧ್ಯಕ್ಷ ನೀಲೇಶ ಶಹಾ, ಜವಳಿ ವರ್ತಕರ ಸಂಘದ ಅಧ್ಯಕ್ಷ ಮಹೇಂದ್ರ ಗೋಕುಲಕರ, ರೆಡಿಮೆಡ್‌ ಅಸೋಸಿಯೇಷನ್‌ನ ಪ್ರದೀಪ ಮೊಗಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !