ಗುರುವಾರ , ಸೆಪ್ಟೆಂಬರ್ 19, 2019
22 °C
ಅರೋಡಿ-ಮಂಡ್ರೋಳ್ಳಿ ದುರಸ್ತಿಗೆ ಜನಪ್ರತಿನಿಧಿಗಳ ಭರವಸೆ

ಹದಗೆಟ್ಟ ರಸ್ತೆ | ವಿದ್ಯಾರ್ಥಿನಿ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ

Published:
Updated:
Prajavani

ಹೊಸನಗರ: ಹದಗೆಟ್ಟ ತಾಲ್ಲೂಕಿನ ಅರೋಡಿ–ಮಂಡ್ರೋಳ್ಳಿ ರಸ್ತೆ ಸರಿಪಡಿಸುವಂತೆ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯಾ ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದೆ.

ಜಿಲ್ಲಾ ಪಂಚಾಯಿತಿ ಸದಸ್ಯರು ಭಾನುವಾರ ಭೇಟಿ ನೀಡಿ ಎರಡು ತಿಂಗಳೊಳಗೆ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದರು.

ಹದಗೆಟ್ಟ ರಸ್ತೆ ಸಂಬಂಧ ಕೊಡಸೆ ಗ್ರಾಮದ ಗಣಪತಿ ಭಟ್ ಅವರ ಪುತ್ರಿ ಐಶ್ವರ್ಯಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಳು. ವಿದ್ಯಾರ್ಥಿನಿ ಐಶ್ವರ್ಯಾಳ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಂದಿನ ಕ್ರಮದ ಬಗ್ಗೆ ಪತ್ರ ರವಾನಿಸಿತ್ತು. ಈ ಪತ್ರಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಬಳಿಕ ಈ ವಿಷಯ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಆರಗ ಜ್ಞಾನೇಂದ್ರರ ಗಮನಕ್ಕೂ ಬಂದಿತ್ತು. ರಸ್ತೆ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಆರೋಡಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್ ಭೇಟಿ ನೀಡಿ ಆರೋಡಿ ಮಂಡ್ರಳ್ಳಿ ರಸ್ತೆ ಅವ್ಯವಸ್ಥೆಯನ್ನು ಪರಿಶೀಲಿಸಿದರು. 

ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಆರಗ ಜ್ಞಾನೇಂದ್ರ ಸ್ಪಂದಿಸುವ ಭರವಸೆ ನೀಡಿದ್ದು, ಮುಂದಿನ 2 ತಿಂಗಳೊಳಗೆ ರಸ್ತೆಯನ್ನು ದುರಸ್ತಿ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರಧಾನಿ ಮಂತ್ರಿ ನರೆಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸ್ಪಂದನೆ ದೊರಕಿರುವುದು ಖುಷಿ ತಂದಿದೆ. ಜನಪ್ರತಿನಿದಿಗಳು ನೀಡಿರುವ ಭರವಸೆಯಂತೆ ರಸ್ತೆ ಅವ್ಯವಸ್ಥೆಗೆ ಮುಕ್ತಿ ಸಿಕ್ಕಿದಾಗ ಮಾತ್ರ ಶ್ರಮ ಸಾರ್ಥಕವಾಗುತ್ತದೆ ಎಂದು ಐಶ್ವರ್ಯಾ ಹೇಳಿದಳು.

ಪ್ರಮುಖರಾದ ಹಿರಿಮನೆ ರಾಜೇಶ್, ಪ್ರಹ್ಲಾದ್, ನಗರ ನಿತಿನ್ ಹಾಜರಿದ್ದರು.
 

Post Comments (+)