ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ವಿರೋಧಿಗಳ ಒಗ್ಗಟ್ಟಿನ ಬಿಸಿ

4 ಲೋಕಸಭೆ, 10 ವಿಧಾನಸಭೆ ಉಪಚುನಾವಣೆ ಫಲಿತಾಂಶ
Last Updated 31 ಮೇ 2018, 20:05 IST
ಅಕ್ಷರ ಗಾತ್ರ

ನವದೆಹಲಿ: ಆಡಳಿತಾರೂಢ ಬಿಜೆಪಿಗೆ ವಿರೋಧ ಪಕ್ಷಗಳ ಒಗ್ಗಟ್ಟು ಬಿಸಿ ಮುಟ್ಟಿಸಿದೆ. ಲೋಕಸಭೆಯ ನಾಲ್ಕು ಮತ್ತು ವಿವಿಧ ರಾಜ್ಯಗಳ ಹತ್ತು ವಿಧಾನ
ಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಒಟ್ಟು 14 ಕ್ಷೇತ್ರಗಳಲ್ಲಿ 11ರಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ಧಾರೆ. ಎನ್‌ಡಿಎಗೆ ಮೂರರಲ್ಲಿ ಮಾತ್ರ ಗೆಲುವು ದಕ್ಕಿದೆ.

ಭಾರಿ ಹಣಾಹಣಿಗೆ ಕಾರಣವಾಗಿದ್ದ ಮತ್ತು ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷಗಳ ಮೈತ್ರಿ ಫಲ ನೀಡಿದೆ. ಆರ್‌ಎಲ್‌ಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಬಸ್ಸುಮ್‌ ಹಸನ್‌ ಅವರು ಅಲ್ಲಿ ಗೆದ್ದಿದ್ದಾರೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಪಕ್ಷ ಅವರಿಗೆ ಬೆಂಬಲ ನೀಡಿದ್ದವು.

ಲೋಕಸಭೆ ಚುನಾವಣೆಗೆ ಒಂದು ವರ್ಷವೂ ಇಲ್ಲ. ಹಾಗಾಗಿ ಈಗ ನಡೆಯುವ ಪ್ರತಿ ಉಪಚುನಾವಣೆಯೂ ಪಕ್ಷಗಳಿಗೆ ಮಹತ್ವದ್ದೇ ಆಗಿದೆ. 11 ರಾಜ್ಯಗಳಲ್ಲಿ ನಡೆದ ಉಪಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆ ಕುಸಿಯುತ್ತಿರುವುದರ ಸಂಕೇತ ಎಂದು ವಿರೋಧ ಪಕ್ಷಗಳು ಬಣ್ಣಿಸಿವೆ.

ಆದರೆ, ಬಿಜೆಪಿ ಇದನ್ನು ಭಿನ್ನವಾಗಿ ನೋಡಲು ಯತ್ನಿಸಿದೆ. ಪ್ರಧಾನಿಯವರ ಕಾರ್ಯಕ್ಷಮತೆ ಮತ್ತು ಕಠಿಣ ದುಡಿಮೆಯೇ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ ಎಂದಿದೆ.

ಗುರುವಾರ ಪ್ರಕಟವಾದ ಫಲಿತಾಂಶವು ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿನ ಬಗ್ಗೆ ಭಾರಿ ಭರವಸೆ ಮೂಡಿಸಿದೆ. ಕೈರಾನಾ ಮತ್ತು ಅದೇ ರೀತಿಯ ಹೊಂದಾಣಿಕೆಯಿದ್ದ ಮಹಾರಾಷ್ಟ್ರದ ಭಂಡಾರ–ಗೋಂದಿಯಾ ಗೆಲುವು ಇದಕ್ಕೆ ಕಾರಣ.

ಮಹಾರಾಷ್ಟ್ರದ ಪಾಲ್ಘರ್‌ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ, ಎನ್‌ಡಿಎ ಮಿತ್ರಕೂಟದ ಭಾಗವಾಗಿರುವ ಶಿವಸೇನಾದಿಂದ ಪ್ರಬಲ ಸ್ಪರ್ಧೆಯನ್ನು ಬಿಜೆಪಿ ಎದುರಿಸಿತ್ತು. ಅಲ್ಲಿ, ವಿರೋಧ ಪಕ್ಷಗಳು ಒಂದಾಗುವುದು ಸಾಧ್ಯವಾಗಿರಲಿಲ್ಲ.

ನಾಗಾಲ್ಯಾಂಡ್‌ ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿಯ ಮಿತ್ರ ಪಕ್ಷವಾಗಿರುವ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿ (ಎನ್‌ಡಿಪಿಪಿ) ಗೆಲುವು ಸಾಧಿಸಿದೆ.

ಲೋಕಸಭೆಯ ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು ವಿರೋಧ ಪಕ್ಷಗಳು 2–2 ಸಮಬಲ ಸಾಧಿಸಿವೆ. ಆದರೆ, ವಿಧಾನಸಭೆಯಲ್ಲಿ ಇಂತಹ ಬಲ ಪ್ರದರ್ಶನ ಎನ್‌ಡಿಎಗೆ ಸಾಧ್ಯವಾಗಿಲ್ಲ. ಹತ್ತು ಕ್ಷೇತ್ರಗಳ ಪೈಕಿ ಉತ್ತರಾಖಂಡದ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಉಳಿದ ಒಂಬತ್ತು ಕ್ಷೇತ್ರಗಳು ವಿರೋಧ ಪಕ್ಷಗಳ ಪಾಲಾಗಿವೆ.

* ದೊಡ್ಡ ನೆಗೆತಕ್ಕೆ ಮೊದಲು ಎರಡು ಹೆಜ್ಜೆ ಹಿಂದಕ್ಕೆ ಸರಿಯಲೇಬೇಕಾಗುತ್ತದೆ. ಬಿಜೆಪಿ ಬಹಳ ದೊಡ್ಡ ನೆಗೆತ ನೆಗೆಯಲಿದೆ

-ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ 

* ಕಾಂಗ್ರೆಸ್‌ ಈಗ ಆಟವೇ ಆಡುತ್ತಿಲ್ಲ. ಹೊರಗೆ ಕುಳಿತು ಇತರ ಪಕ್ಷಗಳ ಪ್ರದರ್ಶನ ನೋಡಿ ಚಪ್ಪಾಳೆ ತಟ್ಟುವುದಷ್ಟೇ ಅದರ ಕೆಲಸ. ಅವರೀಗ ಚಿಯರ್‌ ಲೀಡರ್‌ಗಳಾಗಿದ್ದಾರೆ

-ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ 

* ಸಂಯುಕ್ತ ರಂಗದ ಪ್ರಯೋಗ ಯಶಸ್ವಿಯಾಗಿದೆ. ಬಿಜೆಪಿಯ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ರಾಜಕಾರಣದಲ್ಲಿ ಎಲ್ಲವನ್ನೂ ಬಲಪ್ರಯೋಗದ ಮೂಲಕವೇ ಪಡೆಯುವುದಕ್ಕೆ ಸಾಧ್ಯವಿಲ್ಲ

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ 

ಆರ್‌.ಆರ್‌.ನಗರ: ಕಾಂಗ್ರೆಸ್‌ ಪಾಲು

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರು 25,492 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದರಿಂದಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 79ಕ್ಕೆ ಏರಿದೆ.

ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಇಲ್ಲಿ ಪರಸ್ಪರ ಎದುರಾಳಿಗಳಾಗಿದ್ದವು. 2013ರ ಚುನಾವಣೆಯಲ್ಲಿ ಮುನಿರತ್ನ ಅವರು 21 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT