ಶಿವರಾತ್ರೀಶ್ವರರ ಜಯಂತಿ ಮಹೋತ್ಸವಕ್ಕೆ ಇಂದು ಚಾಲನೆ

7
ಅಧ್ಯಾತ್ಮ ಪ್ರವಚನಗಳ ಸರಮಾಲೆ, ವೈವಿಧ್ಯಮಯ ಗೋಷ್ಠಿಗಳು, ವಸ್ತು ಪ್ರದರ್ಶನ, ಮಾರಾಟ ಮೇಳ

ಶಿವರಾತ್ರೀಶ್ವರರ ಜಯಂತಿ ಮಹೋತ್ಸವಕ್ಕೆ ಇಂದು ಚಾಲನೆ

Published:
Updated:
Prajavani

ಶಿವಮೊಗ್ಗ: ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವಕ್ಕೆ ಹಳೇ ಕಾರಾಗೃಹದ ಅಲ್ಲಮಪ್ರಭು ಬಯಲು ಸಂಪೂರ್ಣ ಸಜ್ಜುಗೊಂಡಿದೆ.

ಇಂದು ಬೆಳಿಗ್ಗೆ 9ಕ್ಕೆ ಜೈಲುವೃತ್ತದಿಂದ ಶಿವಯೋಗಿಗಳ ಉತ್ಸವಮೂರ್ತಿ ಮೆರವಣಿಗೆ ಆರಂಭವಾಗುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ದೊರಕಲಿದೆ.

10.30ಕ್ಕೆ ಷಟ್‌ಸ್ಥಲ ಧ್ವಜಾರೋಹಣ, ದ್ವಾರಗಳು, ಮಂಟಪ ಹಾಗೂ ವೇದಿಕೆ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಧಿಕೃತ ಚಾಲನೆ ನೀಡುವರು.

ಕಳೆಗಟ್ಟಿದ ಕಾರಾಗೃಹ ಆವರಣ: ವರ್ಷದ ಹಿಂದೆ ವಿಚಾರಣಾಧೀನ ಕೈದಿಗಳ ಶ್ರಮದ ತಾಣವಾಗಿದ್ದ ಹಳೇಕಾರಾಗೃಹದ ಇಡೀ ಬಯಲು ಜಯಂತ್ಯುತ್ಸವ ಕಾರಣದಿಂದ ಅಧ್ಯಾತ್ಮದ ಕೇಂದ್ರದಂತೆ ಭಾಸವಾಗುತ್ತಿದೆ. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಉಡುಪಿಯ ಪೇಜಾವರ ಶ್ರೀ, ಸಿದ್ದೇಶ್ವರ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ, ಮುರುಘ ಶರಣರು, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮರುಘರಾಜೇಂದ್ರ ಶ್ರೀ, ಬಸವ ಮರುಳಸಿದ್ಧ ಸ್ವಾಮೀಜಿ, ಹುಬ್ಬಳ್ಳಿಯ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ಗೇರುಕೊಪ್ಪ ಶಿವಲಿಂಗೇಶ್ವರ ಸ್ವಾಮೀಜಿ, ಕೆಳದಿ ಮಹೇಶ್ವರ ಸ್ವಾಮೀಜಿ, ಕೊಲ್ಲಾಪುರದ ಕಾಡಸಿದ್ದೇಶ್ವರ ಸ್ವಾಮೀಜಿ, ಚಿತ್ರದುರ್ಗ ಶಿವಲಿಂಗಾನಂದ ಸ್ವಾಮೀಜಿ, ಶಿರಾಳಕೊಪ್ಪ ಸಿದ್ದೇಶ್ವರ ಸ್ವಾಮೀಜಿ, ತೊಗರ್ಸಿ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ನಾಗಭೂಷಣ ಸ್ವಾಮೀಜಿ, ಶಿಕಾರಿಪುರ ಚನ್ನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಭಾವಚಿತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ. ಇಡೀ ಬಯಲು ಸಂಪೂರ್ಣ ಕೇಸರಿ ಮಯವಾಗಿದೆ.

ಮೂರು ದ್ವಾರಗಳು: ಕಾರ್ಯಕ್ರಮದ ಸ್ಥಳ ತಲುಪಲು ಕಾರಾಗೃಹದ ಬಳಿ ಮೂರು ದ್ವಾರಗಳುನ್ನು ನಿರ್ಮಿಸಲಾಗಿದೆ. ಎಲ್ಲ ದ್ವಾರಗಳ ಮೂಲಕವೂ ವಾಹನಗಳು ಸರಾಗವಾಗಿ ಬಯಲು ತಲುಪಬಹುದು.

ವಿಶಾಲ ವೇದಿಕೆ: ಒಂದೇ ಸಮಯದಲ್ಲಿ 200 ಅತಿಥಿಗಳು ಕುಳಿತುಕೊಳ್ಳುವಷ್ಟು ವಿಶಾಲ ವೇದಿಕೆಯನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಹೆಸರು ಇಡಲಾಗಿದೆ. ಜನರು ಕುಳಿತುಕೊಳ್ಳವ ಸಭಾಂಗಣಕ್ಕೆ ‘ಅಲ್ಲಮ ಬಯಲು’ ಎಂದು ನಾಮಕರಣ ಮಾಡಲಾಗಿದೆ. ಉತ್ಸವಕ್ಕೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ವೇದಿಕೆ ಎಡ ಭಾಗಕ್ಕೆ 300ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿದೆ. ಕೃಷಿ, ಕೈಗಾರಿಕೆ, ವಸ್ತುಗಳ ಪ್ರದರ್ಶನ, ಮಾರಾಟ, ಪುಸ್ತಕ ಮಳಿಗೆ, ಗೃಹಪಯೋಗಿ ವಸ್ತುಗಳು, ಉಡುಪು, ಖಾದಿ ಸಾಮಗ್ರಿಗಳು, ತಿಂಡಿ, ತಿನಿಸುಗಳು ಸೇರಿದಂತೆ ಹಲವು ಬಗೆಯ ಸಾಮಗ್ರಿಗಳನ್ನು ಖರೀದಿಸಬಹುದು. ವಿಶೇಷವಾಗಿ ರೈತರಿಗೆ ಸಂಪೂರ್ಣ ಕೃಷಿ ಮಾಹಿತಿ ನೀಡಲು ಅಗತ್ಯವಾದ ವಾತಾವರಣ ಕಲ್ಪಿಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಪಶು ವೈದ್ಯಕೀಯ ಇಲಾಖೆ, ನಗರಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳು ವಸ್ತುಪ್ರದರ್ಶನ, ಮೇಳಕ್ಕೆ ಸಹಕಾರ ನೀಡಿವೆ.

ಐದು ಗೋಷ್ಠಿಗಳು: ಜ. 5ರಿಂದ 9ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಗೋಷ್ಠಿಗಳು ನಡೆಯಲಿವೆ. ಜ. 7ರಂದು ಹೊರತುಪಡಿಸಿದರೆ (ಅಲ್ಲಮ ಬಯಲಿನಲ್ಲಿ ನಡೆಯಲಿದೆ) ಉಳಿದ ಎಲ್ಲ ಗೋಷ್ಠಿಗಳು ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಜರುಗಲಿವೆ.

ಪ್ರತಿದಿನ ಒಂದರಂತೆ ಒಟ್ಟು ಐದು ಗೋಷ್ಠಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 5ರಂದು ಮಹಿಳೆ–ವಿಕಾಸದ ಹೊಸ ಸಾಧ್ಯತೆಗಳ ಕುರಿತು, ಜ.6 ರಂದು ‘ಯುವಜನ; ಅರಿವಿನ ಅವಕಾಶಗಳು’ 7ರಂದು ‘ಕೃಷಿ; ನೆಲ–ಜಲ’ ಗೋಷ್ಠಿ, 8 ರಂದು ‘ಪರಿಸರ;ಸಂರಕ್ಷಣೆ ಸವಾಲು ಮತ್ತು ಸಾಧ್ಯತೆಗಳು’ ಹಾಗೂ 9 ರಂದು ಆರೋಗ್ಯವೇ ಭಾಗ್ಯ ಕುರಿತು ಗೋಷ್ಠಿಗಳು ನಡೆಯಲಿದೆ.

10ರಂದು ಸಮಾರೋಪ: ಜ. 10ರಂದು ಸಂಜೆ 6ಕ್ಕೆ ಸಮಾರೋಪ ಇರುತ್ತದೆ. ಅಂದು ರಾತ್ರಿ 7 ದಿನಗಳ ಸಂಭ್ರಮಕ್ಕೆ ತೆರೆಬೀಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !