ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರೀಶ್ವರ ಜಯಂತ್ಯುತ್ಸವಕ್ಕೆ ವೈಭವದ ಚಾಲನೆ

ಶಿವಯೋಗಿಗಳ ಉತ್ಸವ ಮೂರ್ತಿ ಮೆರವಣಿಗೆ ಮೆರಗು ತಂದ ಕಲಾ ತಂಡಗಳು
Last Updated 4 ಜನವರಿ 2019, 14:38 IST
ಅಕ್ಷರ ಗಾತ್ರ

ಶಿವಮೊಗ್ಗ: ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಗಳ 1059ನೇ ಜಯಂತಿ ಮಹೋತ್ಸವಕ್ಕೆ ಶುಕ್ರವಾರ ವೈಭವದ ಚಾಲನೆ ನೀಡಲಾಯಿತು.

ಬೆಕ್ಕಿನಕಲ್ಮಠದ ಬಳಿ ಬೆಳಿಗ್ಗೆ 8ಕ್ಕೆ ಶಿವಯೋಗಿಗಳ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಕಲಾತಂಡಗಳ ನೇತೃತ್ವದಲ್ಲಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಅಲ್ಲಮ ಬಯಲು ತಲುಪಿತು.

ಕಾಳೇನಹಳ್ಳಿ ರೇವಣಸಿದ್ದ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿದರು. ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ಅಕ್ಕಮಹಾದೇವಿ ಮಹಾದ್ವಾರ ಉದ್ಘಾಟಿಸಿದರು. ರಾಜಗುರು ಡಾ.ಶ್ರೀ.ಸಿದ್ದಲಿಂಗ ಸ್ವಾಮೀಜಿ, ಮರುಳ ಶಂಕರದೇವ ಮಹಾದಾಸೋಹ ಮಂಟಪ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ ವಿಜಯಕುಮಾರ್ ಅಜಗಣ್ಣ- ಮುಕ್ತಾಯಕ್ಕ ಮಹಾದ್ವಾರ, ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ ಸತ್ಯಕ್ಕ ದ್ವಾರ, ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ ಅನಿಮಿಷ ಯೋಗಿ ದ್ವಾರ ಉದ್ಘಾಟಿಸಿದರು.

ಆದಿ ಜಗದ್ಗುರುಗಳ ಉತ್ಸವ ಮೂರ್ತಿಯನ್ನು ಅಲ್ಲಮ ಬಯಲಿನ ಸುಂದರ ದೇವ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ಶಿಕ್ಷಣ, ದಾಸೋಹದ ತಾಣ:ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಲೀಲಾದೇವಿ ಆರ್. ಪ್ರಸಾದ್, ಸುತ್ತೂರು ಮಠ ಶಿಸ್ತು ಮತ್ತು ಸರಳತೆಗೆ ಹೆಸರಾಗಿದೆ. ಸಾಮಾಜಿಕ ಸೇವೆ, ದಾಸೋಹ, ಶೈಕ್ಷಣಿಕ ಮತ್ತು ಆರೋಗ್ಯ ಸೇವೆಯಲ್ಲಿ ಸುತ್ತೂರು ಮಠದ ಶಿಕ್ಷಣ ಸಂಸ್ಥೆಗಳು ಹೆಸರಾಗಿವೆ. ದೇಶ, ವಿದೇಶಗಳ ಪ್ರಮುಖರು ಭೇಟಿ ನೀಡಿ ಸುತ್ತೂರು ಶ್ರೀಗಳ ಸಾಮಾಜಿಕ ಕಾರ್ಯ ಶ್ಲಾಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

2005ರಲ್ಲಿ ಉಡುತಡಿಯಿಂದ ಕದಳಿವರೆಗೆ ಕೈಗೊಂಡ ಜ್ಯೋತಿ ಯಾತ್ರೆ ಹಾಗೂ ಮೇರಿಲ್ಯಾಂಡ್‌ನಲ್ಲಿ ಅಕ್ಕಮಹಾದೇವಿ ಪ್ರತಿಮೆ ಪ್ರತಿಷ್ಠಾಪನೆಗೆ ಸುತ್ತೂರು ಶ್ರೀಗಳು ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.

ಈ ಉತ್ಸವ ಆಧ್ಯಾತ್ಮ ಚಿಂತನೆಯ ಪ್ರತಿರೂಪ. ಹೆಚ್ಚಿನ ಜನರು ಭಾಗವಹಿಸಿ, ಇಲ್ಲಿ ಬಿತ್ತರವಾಗುವ ಮೌಲ್ಯಗಳನ್ನು ಅರಿಯಬೇಕು. ಅಕ್ಕಮಹಾದೇವಿ ಹುಟ್ಟಿದ ಈ ಜಿಲ್ಲೆಯಲ್ಲಿ ಮಹಿಳೆಯರು ಅಧ್ಯಾತ್ಮ ಪ್ರವಚನ, ಕೃಷಿ , ಶಿಕ್ಷಣ, ಉದ್ಯೋಗ , ಆರೋಗ್ಯ ಗೊಷ್ಠಿಗಳಿಗೆ ಹಾಜರಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಬೇಕು ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಶ್ರೀ, ಬಸವಕೇಂದ್ರ ಬಸವಮರುಳ ಸಿದ್ದಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಮಹಾಪೌರರಾದ ಲತಾಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಎಸ್. ರುದ್ರೇಗೌಡ, ಕಾರ್ಯದರ್ಶಿ ಎನ್.ಜೆ. ರಾಜಶೇಖರ್, ವೀರಮ್ಮ ,ಟಿ.ಬಿ. ಜಗದೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT