ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರದ ಬಲವರ್ಧನೆಗೆ ಸೂಕ್ತ ಯೋಜನೆ

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಸಾಣೇಹಳ್ಳಿ ಶ್ರೀ ಆಗ್ರಹ
Last Updated 7 ಜನವರಿ 2019, 14:20 IST
ಅಕ್ಷರ ಗಾತ್ರ

ಶಿವಮೊಗ್ಗ:ಕೃಷಿ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಸೋಮವಾರ ಕೃಷಿ–ನೆಲ–ಜಲ ವಿಷಯ ಕುರಿತು ನಡೆದ ಗೊಷ್ಠಿಯಲ್ಲಿ ಅವರು ಮಾತನಾಡಿದರು.

ಯಾವ ಸರ್ಕಾರಗಳು ಇತರೆ ಕ್ಷೇತ್ರಗಳಿಗೆ ನೀಡುವ ಆದ್ಯತೆ ಕೃಷಿ ಕ್ಷೇತ್ರಕ್ಕೆ ನೀಡಿಲ್ಲ. ರೈತ ಮೃತಪಟ್ಟ ಮೇಲೆ ಅವನ ಕುಟುಂಬಕ್ಕೆ ಪರಿಹಾರ ನೀಡುವ ಬದಲು ಅವನು ಬದುಕಿದ್ದಾಗಲೇ ನೆರವು ನೀಡಲು ಮುಂದಾಗಬೇಕು. ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರ ಸಾಲ ಮನ್ನಾ ಮಾಡುವುದಾಗಿ ಆಣೆ ಪ್ರಮಾಣ ಮಾಡುವ ಮುಖ್ಯಮಂತ್ರಿಗಳು ಮೊದಲು ಮಾತು ಉಳಿಸಿಕೊಳ್ಳಬೇಕು. ಕೃಷಿಕರಿಗೆ ಬೇಕಾದ ಸವಲತ್ತು ಒದಗಿಸಬೇಕು. ಎಲ್ಲ ಕೆರೆ ಕಟ್ಟೆಗಳನ್ನೂ ಸಂರಕ್ಷಿಸಬೇಕು. ನೀರು ಉಳಿಸಬೇಕು ಎಂದು ಸಲಹೆ ನೀಡಿದರು.

ಅನ್ನ ಇದ್ದರೆ ವಿಜ್ಞಾನ, ಆಹಾರ ಇಲ್ಲದೆ ಬದುಕು ಅಸಾಧ್ಯ ಎನ್ನುವುದಾದರೆ ವಿಜ್ಞಾನದಿಂದ ಏನು ಪ್ರಯೋಜನ. ಅಕ್ಕಿ, ರಾಗಿ, ಜೋಳ ನಕಲು ಮಾಡಲು ಸಾಧ್ಯವೇ? ಇಂತಹ ಸೂಕ್ಷ್ಮಗಳನ್ನು ಆಡಳಿತಶಾಹಿ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪರಿಸರ ತಜ್ಞ ಶಿವಾನಂದ ಕಳವೆ ‘ಜಲಸಂರಕ್ಷಣೆ’ ವಿಷಯ ಕುರಿತು ಮಾತನಾಡಿ, ನೀರಿಲ್ಲದೆ ಊರು ಕಟ್ಟಲು ಸಾಧ್ಯವಿಲ್ಲ. ಹಿಂದಿನ ನಮ್ಮ ಪೂರ್ವಜರು ಊರಿಗೊಂದು ಜಲಮೂಲ ನಿರ್ಮಿಸಿದ್ದರು. ಅದರ ಪರಿಣಾಮವಾಗಿಯೇ ಅಂದು ನೀರಿಗೆ ತತ್ವಾರ ಇಲ್ಲ. ಇಂದು ಅಂತಹ ಜಲಮೂಲ ಸಂರಕ್ಷಿಸುವಂತಹ ಕಾರ್ಯ ಆಗುತ್ತಿಲ್ಲ. ಇದು ಭವಿಷ್ಯದಲ್ಲಿ ದುಸ್ಥಿತಿಗೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಸಿದರು.

ಕೆರೆ ಉಳಿವಿಗೆ ಜಾಗೃತಿ ಪಡೆ:

ರಾಜ್ಯದ ಎಲ್ಲೆಡೆ ಕೆರೆ, ಕಟ್ಟೆ ಉಳಿಸುವ ಜಾಗೃತಿ ಪಡೆ ರಚನೆ ಮಾಡಬೇಕು. ನಮ್ಮ ಬೆಳೆ ಹಾಗೂ ನೀರು ಬಳಸಿಕೊಂಡು ಬೆಳೆ ಬೆಳೆಯುವ ಬಗ್ಗೆ ನಾವೇ ಯೋಚಿಸಬೇಕು. ನಮ್ಮ ಸಮಸ್ಯೆಗೆ ಬೇರೆಯವರ ಪರಿಹಾರ ಅಗತ್ಯವಿಲ್ಲ.ಕಳೆದುಕೊಂಡದ್ದನ್ನು ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕು. ನಮ್ಮಲ್ಲಿರುವ ಜಲಮೂಲ ಉಳಿಸಿ, ಅದರಲ್ಲಿಯೇ ಬೆಳೆ ಬೆಳೆಯುವಂತಹ ಪದ್ಧತಿ ರೂಪಿಸಬೇಕು ಎಂದರು.

ದೇಸಿ ಹಸಿಗಳು ಕೃಷಿಗೆ ಪೂರಕ:

ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಡಾ.ಆನಂದ್‌ ‘ಭೂ ಸಂರಕ್ಷಣೆಯಲ್ಲಿ ಪಶು ಸಂಪತ್ತು ವಿಷಯ ಕುರಿತು ಮಾತನಾಡಿ, ಇಂದು ವಿದೇಶಿ ಹಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕ ಹಾಲು ಕೊಡುವ ಅವುಗಳು ಕೃಷಿಗೆ ಪೂರಕವಾಗಿಲ್ಲ. ದಿನಕ್ಕೆ 45ರಿಂದ 50 ಕೆ.ಜಿ. ಮೇವು ತಿನ್ನುತ್ತವೆ. ಅದೇ ದೇಶಿಯ ತಳಿಗಳಾದ ಹಳ್ಳಿಕಾರ್, ಮಲೆನಾಡು ಗಿಡ್ಡ, ಅಮೃತ್ ತಳಿಯ ಹಸುಗಳಿಗೆ 10ರಿಂದ 11 ಕೆ.ಜಿ. ಮೇವು ಸಾಕು. ಇಂತಹ ಸತ್ಯ ಕೃಷಿಕರು ಅರ್ಥ ಮಾಡಿಕೊಳ್ಳಬೇಕು. ಹೆಚ್ಚಿನ ಹಾಲಿಗಾಗಿ ಬಿಳಿ ದ್ರವ ಸೂಸುವ ಹಸುಗಳ ಅಗತ್ಯವಿಲ್ಲ ಎಂದರು.

ಕಾಸರಗೋಡಿನ ಪಾಮ್‌ ಮುಖ್ಯಸ್ಥ ಡಾ.ಎಚ್.ಪಿ. ಮಹೇಶ್ವರಪ್ಪ ‘ಅಡಿಕೆ ಕೃಷಿ ಮುಂದಿನ ಸವಾಲುಗಳು’ ವಿಷಯ ಕುರಿತು ಮಾತನಾಡಿ, ಅಡಿಕೆ ಬೆಳೆ ಆಹಾರ ಬೆಳೆಯಲ್ಲ. ಆದರೂ, ಲಾಭದ ದೃಷ್ಟಿಯಿಂದ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಮೊದಲು ಸಾಂಪ್ರದಾಯಿಕ ಬೆಳೆಯಾಗಿದ್ದ ಅಡಿಕೆ ಇಂದು ಗುಟ್ಕಾ ಸಹವಾಸದಿಂದ ಕೆಟ್ಟ ಹೆಸರನ್ನೂ ತೆಗೆದುಕೊಂಡಿದೆ. ಹಾಗಾಗಿ, ಅಡಿಕೆ ಪರ್ಯಾಯ ಉಪಯೋಗದತ್ತ ಸಂಶೋಧಕರು ಚಿತ್ತ ಹರಿಸಬೇಕು ಎಂದು ಕೋರಿದರು.

ಕೊಲ್ಲಾಪುರ ಸಿದ್ಧಗಿರಿ ಸಂಸ್ಥಾನ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಚಿತ್ರದುರ್ಗ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್‌. ರುದ್ರೇಗೌಡ್ರು, ಕಾರ್ಯಕ್ರಮ ರೂವಾರಿ ಕೆ.ಜಿ. ನಿಂಗಪ್ಪ ಹೊಳಲೂರು, ಪಾಲಿಕೆ ಸದಸ್ಯ ಎನ್.ಜೆ. ರಾಜಶೇಖರ್, ಸಹಕಾರಿ ಧುರೀಣ ಎಚ್.ಎಲ್. ಷಡಾಕ್ಷರಿ, ಪ್ರಗತಿ ಪರ ಕೃಷಿ ಮಹಿಳೆ ಆಶಾ ಶೇಷಾದ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT