ಸರ್ಕಾರಿ ಗೋಮಾಳದಲ್ಲಿ ಮನೆ- ತಹಶೀಲ್ದಾರ್‌ ಪರಿಶೀಲನೆ

7
ಕಾಡುಗೊಲ್ಲರ ಹಟ್ಟಿಯ ಮನೆಗಳ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಲು ಸೂಚನೆ

ಸರ್ಕಾರಿ ಗೋಮಾಳದಲ್ಲಿ ಮನೆ- ತಹಶೀಲ್ದಾರ್‌ ಪರಿಶೀಲನೆ

Published:
Updated:
Deccan Herald

ಮಾಗಡಿ: ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವ ಬಡವರು ನಿಗದಿತ ಅರ್ಜಿ ಸಲ್ಲಿಸಿದರೆ 93 ಸಿ ಕಾಯ್ದೆ ಅನ್ವಯ ಸಕ್ರಮಗೊಳಿಸಲಾಗುವುದು ಎಂದು ತಹಶೀಲ್ದಾರ್‌ ಎನ್‌.ಶಿವಕುಮಾರ್‌ ತಿಳಿಸಿದರು.

ತಟವಾಳ್‌ ಗ್ರಾಮದ ಸರ್ವೇ ನಂಬರ್‌ 59 ಮತ್ತು 60 ರಲ್ಲಿ 60 ವರ್ಷಗಳಿಂದಲೂ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿರುವ ಕಾಡುಗೊಲ್ಲರ ಹಟ್ಟಿಯಲ್ಲಿ ಮನೆಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮನೆಕಟ್ಟಿಕೊಂಡಿರುವ ಬಡವರು ಸೆ.16ರ ಒಳಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರಕ್ಕೆ ದಾಖಲಾತಿ ಶುಲ್ಕ ಕಟ್ಟಿದರೆ ಕಾನೂನು ರೀತಿ ಸಕ್ರಮ ಗೊಳಿಸಿ ಹಕ್ಕುಪತ್ರಗಳನ್ನು ಶಾಸಕ ಎ.ಮಂಜುನಾಥ ಅವರ ಮೂಲಕ ವಿತರಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳು ಗೋಮಾಳದಲ್ಲಿ ಜಮೀನು ಉಳುಮೆ ಮಾಡಿಕೊಂಡವರು ಅರ್ಜಿ ಸಲ್ಲಿಸಿದರೆ ಕಾನೂನು ರೀತಿ ಪರಿಶೀಲನೆ ನಡೆಸಿ ಸಕ್ರಮಗೊಳಿಸಲಾಗುವುದು ಎಂದರು.

ಬುಧವಾರ ತಟವಾಳ್‌ ದಾಖಲೆ ಕಾಡುಗೊಲ್ಲರ ಹಟ್ಟಿ, ಮುನಿಯಪ್ಪನ ಪಾಳ್ಯ, ಹಾರೋಹಳ್ಳಿಗಳಲ್ಲಿ ಅಕ್ರಮವಾಗಿ ಕಟ್ಟಿಕೊಂಡಿರುವ 64 ಮನೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ಅವರು ತಿಳಿಸಿದರು.

ಕಾಡುಗೊಲ್ಲರ ಹಟ್ಟಿಯ ಸರ್ವೇ ನಂಬರ್‌ 59ರಲ್ಲಿ ಶತಮಾನಗಳ ಹಿಂದಿನಿಂದ ಇರುವ ಅಜ್ಜಪ್ಪ ಸ್ವಾಮಿ ಗದ್ದುಗೆ ಬಳಿ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡುವಂತೆ ಅಜ್ಜಪ್ಪ ಸ್ವಾಮಿ ದೇವಾಲಯದ ಪೂಜಾರಿ ಚಿತ್ತಯ್ಯ, ಮತ್ತು ಜುಂಜಪ್ಪ ಸ್ವಾಮಿ ದೇವಾಲಯದ ಪೂಜಾರಿ ಚಿಕ್ಕಣ್ಣ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್‌, ಗೋವಿಂದ ಸ್ವಾಮಿ, ಗ್ರಾಮಲೆಕ್ಕಿಗ ಎಂ.ಸಿ,ಚಂದ್ರಶೇಖರ್‌, ಗ್ರಾಮಸೇವಕರಾದ ಹರ್ತಿ ಕುಮಾರ್‌, ಹಾರೋಹಳ್ಳಿ ರಂಗಸ್ವಾಮಯ್ಯ, ದಬ್ಬಗುಳಿ ಮಂಜುನಾಥ್‌, ಶ್ರೀಪತಿಹಳ್ಳಿ ಶಿವಕುಮಾರ್‌, ಗೊಲ್ಲರ ಹಟ್ಟಿ ಕರಿಯಪ್ಪ, ಚಿತ್ತಯ್ಯ, ಲಕ್ಷ್ಮಮ್ಮ, ರಾಘವೇಂದ್ರ,ಪುಟ್ಟರಾಜು ಇದ್ದರು. ಕಾಡುಗೊಲ್ಲರ ಹಟ್ಟಿಯಲ್ಲಿ ಅರ್ಜಿ ಸಲ್ಲಿಸದೆ ಇರುವ ಅಕ್ರಮ ಮನೆಗಳನ್ನು ಕಟ್ಟಿಕೊಂಡಿರುವವರು ಅರ್ಜಿ ಸಲ್ಲಿಸಬೇಕು ಎಂದು ಪೂಜಾರಿ ಚಿತ್ತಯ್ಯ ಮನವಿ ಮಾಡಿದರು.

ಗೊಲ್ಲರ ಹಟ್ಟಿ ನಿವಾಸಿಗಳಾದ ಶಿವಲಿಂಗಯ್ಯ, ಮಹಲಿಂಗಯ್ಯ, ಈರಯ್ಯ, ಶಿವಲಿಂಗಯ್ಯ, ಹೇಮಂತ ಕುಮಾರ್‌, ಪ್ರೇಮ, ದೊಡ್ಡತಿಮ್ಮಕ್ಕ, ಕುಮಾರ್‌, ತಿಮ್ಮಕ್ಕ, ಪುಟ್ಟರಾಜು, ಕರಿಯಪ್ಪ, ಚಿತ್ತಯ್ಯ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಅಜ್ಜಪ್ಪ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ತಹಶೀಲ್ದಾರರನ್ನು ಸನ್ಮಾನಿಸಲಾಯಿತು. ಹಾರೋಹಳ್ಳಿ ಗುಂಡು ತೋಪಿನಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿರುವ ದಲಿತರು ಸಕ್ರಮಗೊಳಿಸುವಂತೆ ಮನವಿ ಸಲ್ಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !