ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಕ್ಕೇ ವಂಚಿಸಿದ್ದ ವಕೀಲ ಸೆರೆ

ಕೊಲೆ ಯತ್ನ ಆರೋಪಿಗೆ ಜಾಮೀನು ಕೊಡಿಸಿದ್ದ ಪ್ರಕರಣ
Last Updated 5 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು:‌ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ಕೊಲೆ ಯತ್ನ ಪ್ರಕರಣದ ಆರೋಪಿಗೆ ಜಾಮೀನು ಕೊಡಿಸಿದ್ದ ಆರೋಪದಡಿ ವಕೀಲ ಜಿ. ನಾಗರಾಜಗೌಡ ಅವರನ್ನು ಅಶೋಕನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕಬ್ಬನ್‌ಪೇಟೆಯಲ್ಲಿ ಕಚೇರಿ ಹೊಂದಿರುವ ಅವರು, ಆರೋಪಿ ರಮೇಶ್‌ ಎಂಬಾತನಿಗೆ ಜಾಮೀನು ಕೊಡಿಸಿದ್ದರು. ವಕೀಲರು ಸಲ್ಲಿಸಿದ್ದ ದಾಖಲೆಗಳೆಲ್ಲ ನಕಲಿ ಎಂಬುದು ನ್ಯಾಯಾಧೀಶರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡ 43ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ನಾಯ್ಕ, ನಾಗರಾಜಗೌಡ ಬಂಧನಕ್ಕೆ ವಾರಂಟ್‌ ಹೊರಡಿಸಿದ್ದರು. ಅದರನ್ವಯ ಪೊಲೀಸರು, ಆರೋಪಿಯನ್ನು ಬಂಧಿಸಿ ಮೇ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಆರೋಪಿಯು ಜೈಲಿನಲ್ಲೇ ಇದ್ದ. ಆತನ ಪರವಾಗಿ ವಕೀಲರೇ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಜತೆಗೆ, ಮೂರು ವರ್ಷಗಳ ಹಿಂದೆ ವರ್ಗವಾಗಿದ್ದ ನ್ಯಾಯಾಧೀಶರೊಬ್ಬರ ಸಹಿಯನ್ನೂ ನಕಲು ಮಾಡಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯವು ವಾರಂಟ್‌ ಜಾರಿ ಮಾಡಿತ್ತು. ಅದನ್ನು ನಾವು ಪಾಲಿಸಿದ್ದೇವೆ. ಆರೋಪಿ ರಮೇಶ್ ಬಂಧನಕ್ಕೂ ವಾರಂಟ್ ಜಾರಿಯಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಕರಣ ಕೈಬಿಟ್ಟಿದ್ದ ಪೊಲೀಸರು: ಹಲಸೂರಿನ ಎಂ.ವಿ.ಗಾರ್ಡನ್‌ ನಿವಾಸಿ ರಮೇಶ್‌, 2016ರಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ್ದ. ಆ ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದ ಪೊಲೀಸರು, ಜೈಲಿಗೆ ಕಳುಹಿಸಿದ್ದರು. ಅಂದಿನಿಂದ ಜೈಲಿನಲ್ಲೇ ಇದ್ದ ಆರೋಪಿಗೆ ಯಾವುದೇ ನ್ಯಾಯಾಲಯದಲ್ಲೂ ಜಾಮೀನು ಸಿಕ್ಕಿರ
ಲಿಲ್ಲ. ಅವಾಗಲೇ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಧೀಶರ ದಿಕ್ಕು ತಪ್ಪಿಸಿ ಜಾಮೀನು ಪಡೆದುಕೊಂಡಿದ್ದ.

ಇದನ್ನು ಪತ್ತೆ ಹಚ್ಚಿದ್ದ 10ನೇ ಎಸಿಎಂಎಂ ನ್ಯಾಯಾಲಯದ ಶಿರಸ್ತೇದಾರರಾದ ಎಂ.ಲತಾ, ಅಶೋಕನಗರ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದರು. ನಂತರ, ಪ್ರಕರಣವನ್ನು ಕೈಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT