ಸೋಮವಾರ, ಮಾರ್ಚ್ 8, 2021
19 °C
ಎಲ್. ನರಸಿಂಹಯ್ಯ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ಶಿಕ್ಷಕರು ತಪ್ಪು ದಾರಿಯಲ್ಲಿ ಸಾಗಬಾರದು: ಗಾಂಧಿವಾದಿ ಎಲ್. ನರಸಿಂಹಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೈಲಾಂಚ (ರಾಮನಗರ): ಎಂತಹ ಕಷ್ಟಕರ ಸ್ಥಿತಿ ಎದುರಾದರೂ ಶಿಕ್ಷಕರು ತಪ್ಪು ದಾರಿಯಲ್ಲಿ ಸಾಗಬಾರದು ಎಂದು ಗಾಂಧಿವಾದಿ ಎಲ್. ನರಸಿಂಹಯ್ಯ ಹೇಳಿದರು.

ಇಲ್ಲಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್‌ ಟ್ರಸ್ಟ್‌್ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಎಲ್. ನರಸಿಂಹಯ್ಯ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣಿ, ವೈದ್ಯ, ವಿಜ್ಞಾನಿ, ವ್ಯಾಪಾರಿ ಸೇರಿದಂತೆ ಯಾವುದೇ ವೃತ್ತಿಯ ಜನರು ಹಾದಿ ತಪ್ಪಿದರೂ ದೇಶಕ್ಕೆ ದೊಡ್ಡ ಗಂಡಾಂತರ ಎದುರಾಗುವುದಿಲ್ಲ. ಆದರೆ, ಶಿಕ್ಷಕರು ಹಾದಿ ತಪ್ಪಿದರೆ ಇಡೀ ದೇಶವೇ ತಪ್ಪು ದಾರಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.

ಶಿಕ್ಷಕರು ತಮ್ಮಲ್ಲಿರುವ ಆಲಸ್ಯ, ಸೋಮಾರಿತನ, ದ್ವೇಷ, ಅಸೂಯೆ ಬಿಡಬೇಕು. ಸಮಾಜದಲ್ಲಿರುವ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ಸಮಾಜಮುಖಿ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಸಂಗೀತ ವಿದ್ವಾನ್ ಶಿವಾಜಿ ರಾವ್ ಮಾತನಾಡಿ, ಶಿಕ್ಷಕರು ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು. ವೈಯಕ್ತಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ನಗುಮುಖದಿಂದ ಪಾಠ ಮಾಡುವುದನ್ನು ಕಲಿಯಬೇಕು. ಬೋಧಿಸುವ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿಕೊಂಡರೆ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಸುಲಭವಾಗುತ್ತದೆ ಎಂದರು.

ಶಾಂತಲಾ ಚಾರಿಬಟಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬೋಧನೆ ಪ್ರವೃತ್ತಿಯಾಗಿ ಪರಿವರ್ತನೆ ಆಗುತ್ತಿದೆ. ಆದರೆ ಎಂದಿಗೂ ಶಿಕ್ಷಕ ವೃತ್ತಿಯ ಘನತೆ ಕುಗ್ಗಿಲ್ಲ. ಮುಂದೆಯೂ ಅದನ್ನು ಹಾಗೆಯೇ ಉಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನಪ್ಪ, ಸಿ. ಚಿಕ್ಕಣ್ಣ, ರಾಜೇಶ್ವರಿ, ಚಾಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಕರ್ನಾಟಕ ಗಮಕ ಕಲಾ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಶಿಕ್ಷಕ ನೇ.ರ. ಪ್ರಭಾಕರ್, ಪರಿಸವಾದಿ ಬಿ.ಟಿ. ರಾಜೇಂದ್ರ, ಅರ್ಪಿತಾ ಚಾರಿಟಬಲ್ ಟ್ರಸ್ಟಿನ ಎನ್.ವಿ. ಲೋಕೇಶ್, ಗಾಯಕ ಗಂಗಾಧರಪ್ಪ ಇದ್ದರು.

* ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಕೆಲಸವಾಗಿದೆ. ಅದೊಂದು ಉದ್ಯೋಗವಾಗಿರದೇ, ವ್ರತದಂತೆ ಪಾಲಿಸಲಾಗುತ್ತಿದೆ
-ಎಲ್‌. ನರಸಿಂಹಯ್ಯ, ಗಾಂಧಿವಾದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.