ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣಂದೂರು | ದುಡಿಯುವ ಕೈಗಳ ಕೆಲಸ ಕಸಿದ ಕೊರೊನಾ

ನೆರವಿಗಾಗಿ ಕಾಯುತ್ತಿವೆ 10 ಅಲೆಮಾರಿ ಕುಟುಂಬಗಳು
Last Updated 31 ಮಾರ್ಚ್ 2020, 7:16 IST
ಅಕ್ಷರ ಗಾತ್ರ

ಕೋಣಂದೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಒಂದು ವಾರದಿಂದ ಹಸಿವಿನಿಂದ ಪರಿತಪಿಸುತ್ತಿದ್ದಾರೆ ಹತ್ತು ಅಲೆಮಾರಿ ಕುಟುಂಬಗಳ 40ಕ್ಕೂ ಹೆಚ್ಚು ಸದಸ್ಯರು.

ಕೋಣಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಿಬೈಲಿನಲ್ಲಿ 17 ವರ್ಷಗಳಿಂದ ನೆಲೆ ನಿಂತಿರುವ ಅಲೆಮಾರಿಗಳು ಕೂಲಿ ನಾಲಿ ಮಾಡಿ ದಿನ ಕಳೆಯುತ್ತಿದ್ದರು. ಕೊರೊನಾ ಭೀತಿ ಅವರ ಬದುಕಿನಲ್ಲಿಯೂ ಬಿರುಗಾಳಿ ಎಬ್ಬಿಸಿದೆ. ಲಾಕ್‌ಡೌನ್ ಹೆಸರಿನಲ್ಲಿ ವಾರದಿಂದೀಚೆಗೆ ಇವರಿಗೆ ಕೆಲಸವಿಲ್ಲದೇ ಇದ್ದಬದ್ದ ಕಾಳು, ಧಾನ್ಯ, ಅಕ್ಕಿ ಖಾಲಿಯಾಗಿ ಈ ಕುಟುಂಬಗಳು ಹಸಿವಿನಿಂದ ಕಂಗಾಲಾಗಿವೆ.

40ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಟೆಂಟ್ ವಾಸಿಗಳಿಗೆ ಯಾವುದೇ ಆರೋಗ್ಯ ಸೌಲಭ್ಯಗಳು ಇಲ್ಲ. ಮಾಸ್ಕ್, ಸಾಮಾಜಿಕ ಅಂತರ ಪರಿಕಲ್ಪನೆಯ ಅರಿವು ಇವರಿಗಿಲ್ಲ. ಆದರೂ ಚಿಂದಿ ಬಟ್ಟೆಯನ್ನು ಬಳಸಿ ಮಾಸ್ಕ್ ತಯಾರಿಸಿಕೊಂಡಿದ್ದಾರೆ. ಪ್ರಾಣಿಗಳಂತೆ ಬದುಕು ಸಾಗಿಸುತ್ತಿರುವ ಇವರಿಗೆ ಈಚೆಗೆ ಅಳವಡಿಸಲಾದ ಸೋಲಾರ್ ದೀಪವೊಂದನ್ನು ಹೊರತುಪಡಿಸಿದರೆ ನಾಗರಿಕ ಸೌಲಭ್ಯಗಳು ದೊರಕಿಲ್ಲ. ವೃದ್ಧರು, ಮಕ್ಕಳೇ ಹೆಚ್ಚಿರುವ ಈ ಟೆಂಟ್ ವಾಸಿಗಳಿಗೆ ಜೋಪಡಿ ವಾಸ, ಬಯಲು ಶೌಚ, ಸೀರೆ ಮರೆಮಾಡಿದ ಸ್ನಾನಗೃಹದಲ್ಲಿ ಶುಚಿತ್ವ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ.

‘ಕೂಲಿ, ತೋಟದ ಕೆಲಸ, ಮರಳು ತುಂಬುವುದು, ಮೀನು ಹಿಡಿಯುವುದು, ಹಮಾಲಿ ಇವರ ನಿತ್ಯದ ಕಾಯಕವಾಗಿತ್ತು. ಆದರೆ ಕೆಲ ದಿನಗಳಿಂದ ಕೂಲಿ ಇಲ್ಲದೇ ಈ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ಇವರ ತುತ್ತಿನ ಕೂಳಿನ ಬಯಕೆಯನ್ನು ಈಡೇರಿಸಲು ಇದುವರೆಗೂ ಯಾವೊಬ್ಬ ಅಧಿಕಾರಿಯಾಗಲೀ ಜನಪ್ರತಿನಿಧಿಗಳಾಗಲೀ ಸಂಘ–ಸಂಸ್ಥೆಗಳಾಗಲೀ ಮುಂದೆ ಬಂದಿಲ್ಲ. ದಿನನಿತ್ಯದ ಅಗತ್ಯಗಳನ್ನು ಪೂರೈಸಬೇಕು. ಈ ಸಂಬಂಧ ಗ್ರಾಮ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸಾವಿತ್ರಿ.

‘10 ಕುಟುಂಬಗಳಲ್ಲಿ ಕೇವಲ 5 ಕುಟುಂಬಗಳಿಗೆ ಪಡಿತರ ವಿತರಣೆಯಾಗುತ್ತಿದ್ದು, ಅದನ್ನೇ ಹಂಚಿ ತಿನ್ನುತ್ತಿದ್ದೆವು. ಆದರೆ ಉಳಿದ ದಿನಗಳನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಆಶಾ. ಈ ಟೆಂಟ್‌ನಲ್ಲಿ ಸುಮಾರು 80 ವಯೋಮಾನದ ನಾಲ್ವರು ವೃದ್ಧರು ಇದ್ದು, ಅವರಿಗೆ ಸರ್ಕಾರದಿಂದ ವೃದ್ಧಾಪ್ಯ ವೇತನ ಬರುತ್ತಿಲ್ಲ. ಆಶಾ ಕಾರ್ಯಕರ್ತರು ಮತ್ತು ವೈದ್ಯಾಧಿಕಾರಿಗಳು ಶುಚಿತ್ವಕ್ಕೆ ಮಹತ್ವ ನೀಡುವಂತೆ ಸಲಹೆ ನೀಡುತ್ತಾರೆ. ಆದರೆ ಟೆಂಟ್‌ನಲ್ಲಿ ಯಾವ ಮಟ್ಟದ ಶುಚಿತ್ವ ಸಾಧ್ಯ ಹೇಳಿ?’ ಎಂದು ಅವರು ಅಲವತ್ತುಕೊಳ್ಳುತ್ತಾರೆ. ಸಾಬೂನು, ಔಷಧಗಳನ್ನು ಕೊಳ್ಳಲು ಹಣವಿಲ್ಲ. ನಮ್ಮ ಸ್ಥಿತಿ ಯಾರಿಗೂ ಬರಬಾರದು’ ಎನ್ನುವುದು ಅವರ ಅಳಲು.

ಅಲೆಮಾರಿಗಳ ಮೂಲಭೂತ ಬೇಡಿಕೆಗಳಿಗೆ ತಾಲ್ಲೂಕು ಆಡಳಿತ ಸತತ 17 ವರ್ಷಗಳಿಂದ ಸ್ಪಂದಿಸುತ್ತಿಲ್ಲ ಎಂದು ಆರೋಪಿಸುತ್ತಾರೆ ರಮೇಶ್. ಇವರ ಹಸಿವನ್ನು ನೀಗಿಸಲು ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳು ನೆರವಿನ ಹಸ್ತ ಚಾಚುತ್ತವೆಯೇ ಎಂಬುದೇ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT