ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಮಾನವೀಯ ಮೌಲ್ಯ ಬಿತ್ತುವ ರಂಗಭೂಮಿ: ಪುರುಷೋತ್ತಮ್ ತಲವಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಣ್ಣಿನಂತಹ ಮಕ್ಕಳ ಮನಸ್ಸನ್ನು ಒಳ್ಳೆಯ ಆಕೃತಿಗಳನ್ನಾಗಿಸುವ ಕಾರ್ಯವನ್ನು ರಂಗಭೂಮಿ ಮಾಡುತ್ತದೆ ಎಂದು ಸಾಗರದ ರಂಗಕರ್ಮಿ ಪುರುಷೋತ್ತಮ್ ತಲವಾಟ ಅಭಿಪ್ರಾಯಪಟ್ಟರು.

ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಾಯಣವು ಸೋಮವಾರ ಆಯೋಜಿಸಿದ್ದ ‘ಚಿಣ್ಣರೊಂದಿಗೆ ರಂಗಾಯಣ’ ಬೇಸಿಗೆ ಶಿಬಿರದ ಸಮಾರೋಪ ಹಾಗೂ ರಂಗ ನಿರ್ದೇಶಕಿ ದಿವಂಗತ ಎಸ್. ಮಾಲತಿ ಅವರಿಗೆ ರಂಗನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿ ಒಂದು ಶಕ್ತಿಯುತ ಸಮೂಹ. ಇದು ಸಿನಿಮಾ ಮತ್ತು ಇನ್ನಿತರೆ ಮಾಧ್ಯಮಗಳಿಗಿಂತ ವಿಭಿನ್ನವಾದ ಜೀವಂತ ಲೋಕ. ಇಲ್ಲಿ ಮಕ್ಕಳು ಅನೇಕ ವಿಷಯಗಳನ್ನು ಕಲಿಯಲು ಅವಕಾಶ ಇರುತ್ತದೆ ಎಂದರು.

‘ಎಲ್ಲಾ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅವರನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಮುಗ್ಧ ಮನಸ್ಸನ್ನು ಘಾಸಿಗೊಳಿಸುವ ಕಾರ್ಯ ಮಾಡದೆ ಅವರ ಆಸಕ್ತ ವಿಷಯಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ’ ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಡಾ. ಎಂ. ಗಣೇಶ್, ‘ರಂಗಭೂಮಿ ಮತ್ತು ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಎಸ್. ಮಾಲತಿ. ಇಂದಿನ ದಿನ ಅವರಿಗೆ ಸಲ್ಲಿಸಲಾಗುತ್ತಿರುವ ರಂಗನಮನ ಅರ್ಥಪೂರ್ಣವಾಗಿದೆ. ಮಾಲತಿಯವರಿಗೆ ಬಿ.ವಿ. ಕಾರಂತ ಪ್ರಶಸ್ತಿಯನ್ನು ನೀಡಬೇಕು’ ಎಂದು ಒತ್ತಾಯಿಸಿದರು. 

ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಲವ, ‘ಹುಟ್ಟುವಾಗ ವಿಶ್ವ ಮಾನವರಾಗುವ ನಾವು ಬೆಳೆಯುತ್ತಾ ಅಲ್ಪ ಮಾನವರಾಗಿ ಬದಲಾಗುತ್ತೇವೆ. ಮತ್ತೆ ವಿಶ್ವ ಮಾನವರನ್ನಾಗಿ ಮಾಡುವ ಕಾರ್ಯವನ್ನು ರಂಗಭೂಮಿ ಮಾಡುತ್ತದೆ’ ಎಂದು ಹೇಳಿದರು.

‘ಇಂದು ಜಗತ್ತಿನಲ್ಲಿ ಎಲ್ಲಾ ವಿಷಯಗಳು ವ್ಯವಹಾರಗಳಾಗಿ ಬದಲಾಗಿವೆ. ಶಿಕ್ಷಣವೂ ಮಾರಾಟದ ಸರಕಾಗಿ ಮಾರ್ಪಟ್ಟಿದೆ. ಇಂದಿನ ಶಿಕ್ಷಣ ಅಹಂಕಾರದ ಮೂಲವಾಗಿದೆಯೇ ಹೊರತು ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲವಾಗಿಲ್ಲ. ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯ ರಂಗ ಭೂಮಿಯಿಂದ ಆಗುತ್ತದೆ’ ಎಂದರು.

ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ಶಿಬಿರದ ನಿರ್ದೇಶಕರಾದ ಚಂದ್ರು ತಿಪಟೂರು, ಆರ್. ಗಿರೀಶ್, ಚಿಂತಕರಾದ ಕೆ. ಶರೀಫಾ, ಎಂ. ರಾಘವೇಂದ್ರ ಇದ್ದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು