ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಪತ್ತೆಯಾಗದ 115 ಮಕ್ಕಳು

ಮೈಸೂರು: ಕಾಣೆಯಾದವರಲ್ಲಿ ಬಾಲಕಿಯರೇ ಅಧಿಕ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಒಟ್ಟು 1,491 ಮಕ್ಕಳು ನಾಪತ್ತೆಯಾಗಿದ್ದು, ಇವರಲ್ಲಿ ಬಾಲಕಿಯರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.

ಈವರೆಗೆ 115 ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಒಂದೆಡೆ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದರೆ, ಇನ್ನೊಂದೆಡೆ ಕಣ್ಮರೆಯಾದವರು ಎಲ್ಲಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ಕಣ್ಮರೆಯಾದ ಮಕ್ಕಳ ಪತ್ತೆಗೆ ‘ಕಾಣೆಯಾದ ಮಕ್ಕಳ ಬ್ಯೂರೊ’, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೆರವಿನಿಂದ ಜಿಲ್ಲಾ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಪರ್ದಿಯಲ್ಲಿರುವ ‘ಕಾಣೆಯಾದ ಮಕ್ಕಳ ಬ್ಯೂರೊ’ದ ಅಂಕಿ ಅಂಶಗಳ ಪ್ರಕಾರ 2011ರಿಂದ 2017ರ ವರೆಗೆ 18 ವರ್ಷದೊಳಗಿನ 714 ಬಾಲಕರು ಹಾಗೂ 777 ಬಾಲಕಿಯರು ಕಣ್ಮರೆಯಾಗಿದ್ದಾರೆ. ಅವರಲ್ಲಿ 645 ಬಾಲಕರು, 731 ಬಾಲಕಿಯರನ್ನು ರಕ್ಷಿಸಲಾಗಿದೆ. ಇನ್ನೂ 69 ಬಾಲಕರು, 46 ಬಾಲಕಿಯರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

‘ಅಪಹರಣ, ದುಷ್ಕರ್ಮಿಗಳ ಜಾಲದ ಜೊತೆಗೆ ಮನೆಯಲ್ಲಿ ಗಲಾಟೆ, ಮನಸ್ತಾಪ, ಓದಲು-ಬರೆಯಲು ಪೋಷಕರ ಒತ್ತಡ, ನಗರಗಳಲ್ಲಿ ಪೋಷಕರ ನಿರ್ಲಕ್ಷ್ಯದಿಂದ ತಪ್ಪಿಸಿಕೊಂಡವರು, ಯಾರದೋ ಆಮಿಷ, ದುಡಿಮೆ, ಗೆಳೆಯರ ಸಹವಾಸ, ದುಶ್ಚಟ, ಪ್ರೇಮಪಾಶಕ್ಕೆ ಬಿದ್ದು ಕಾಣೆಯಾಗುತ್ತಿರುವ ಪ್ರಕರಣಗಳು ಸೇರಿವೆ’ ಎಂದು ಬ್ಯೂರೊ ನಿರ್ದೇಶಕ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಕಾಣೆಯಾದ ಮಕ್ಕಳನ್ನು ಪತ್ತೆ ಮಾಡಲು ಅನುಕೂಲವಾಗುವಂತೆ ಅಂತರ್ಜಾಲ ಆಧಾರಿತ ಮಾಹಿತಿ ವ್ಯವಸ್ಥೆ ರೂಪಿಸಲಾಗಿದೆ.

‘ಅಂತರ್ಜಾಲದಲ್ಲಿ ಮಾಹಿತಿಕ್ರೋಡೀಕೃತವಾದರೆ ಯಾವುದೇ ಮೂಲೆಯಲ್ಲಿದ್ದರೂ, ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಈ ವ್ಯವಸ್ಥೆ ಮೂಲಕ ಪ್ರತಿ ಜಿಲ್ಲೆಗೆ ಸಂದೇಶ ಹೋಗುತ್ತಿರುತ್ತದೆ’ ಎಂದು ಬ್ಯೂರೊ ಜಿಲ್ಲಾ ಸಂಯೋಜಕಿ ಚೈತ್ರಾ ಮಾಹಿತಿ ನೀಡಿದರು.

ಪತ್ತೆಗೆ ವೆಬ್‌ಸೈಟ್‌: ಕಣ್ಮರೆಯಾದ ಮತ್ತು ಪತ್ತೆಯಾದ ಮಕ್ಕಳ ಬಗ್ಗೆ ವೆಬ್‌ಸೈಟ್ www.trackthemissingchild.gov.in ಮತ್ತು www.childmiss.org ನಲ್ಲಿ ಮಾಹಿತಿ ಸಿಗುತ್ತದೆ. ಸಾರ್ವಜನಿಕರು ಇಲ್ಲಿಯೇ ದೂರು ದಾಖಲಿಸಲು ಅವಕಾಶವಿದೆ.

* ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿದ್ದಾರೆ. ಸಮಾಜಘಾತುಕ ಶಕ್ತಿಗಳ ಜಾಲದೊಳಗೆ ಸಿಲುಕುತ್ತಿರುವ ಸಾಧ್ಯತೆ ಇದೆ

–ಸುರೇಶ್‌ ನಿರ್ದೇಶಕ, ಕಾಣೆಯಾದ ಮಕ್ಕಳ ಬ್ಯೂರೊ, ಮೈಸೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT