ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ-–ಆಗುಂಬೆ ಬಸ್ ಸಂಚಾರ ಸ್ಥಗಿತ

ಪ್ರಯಾಣಿಸಲು ಪರದಾಡುತ್ತಿರುವ ಸ್ಥಳೀಯರು l ಜನರ ಸಮಸ್ಯೆ ಕೇಳದ ಅಧಿಕಾರಿಗಳು
Last Updated 29 ಏಪ್ರಿಲ್ 2019, 17:46 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಆಗುಂಬೆ ಘಾಟಿ ಮಾರ್ಗದ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಕ್ಕೆ ಒಳಗಾಗಿರುವ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಪರದಾಟಕ್ಕೆ ಕೊನೆ ಇಲ್ಲದಂತಾಗಿದೆ. ಬಸ್ ಸೌಕರ್ಯ ಕಲ್ಪಿಸುವಂತೆ ಪ್ರಯಾಣಿಕರು ರಸ್ತೆಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

ಈ ಮಾರ್ಗದಲ್ಲಿ ಏಪ್ರಿಲ್ 30ರವರೆಗೆ ಬದಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಘಾಟಿ ರಸ್ತೆ ಮಾರ್ಗದ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಸ್ ಸಂಚಾರ ಆರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ತೀರ್ಥಹಳ್ಳಿ- ಆಗುಂಬೆ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ಜಿಲ್ಲಾಡಳಿತದ ಆದೇಶದ ಮೇರೆಗೆ ತೀರ್ಥಹಳ್ಳಿ - ಆಗುಂಬೆ ನಡುವೆ ತಾತ್ಕಾಲಿಕವಾಗಿ ಕೆಎಸ್ಆರ್‌ಟಿಸಿ ಬಸ್ ಅಪರೂಪಕ್ಕೆ ಸಂಚರಿಸುತ್ತಿವೆ. ಅನಾರೋಗ್ಯಪೀಡಿತರು, ವಯೋ ವೃದ್ಧರು ಬಸ್ಸಿಗಾಗಿ ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದು ಸುಸ್ತಾಗುವಂತಾಗಿದೆ.

ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಉಂಟಾಗಿರುವ ಸಮಸ್ಯೆಗಳನ್ನು ಆಲಿಸಲು ಆಡಳಿತ ಮುಂದಾಗಿಲ್ಲ. ಜನಪ್ರತಿನಿಧಿಗಳು ಜನರ ಅಹವಾಲನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸಮಸ್ಯೆ ಪರಿಹರಿಸಲು ಸ್ಪಂದಿಸಬೇಕಿದ್ದ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಫೋನ್ ಕರೆ ಸ್ವೀಕರಿಸದೇ ತಪ್ಪಿಸಿಕೊಳ್ಳುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬದಲಿ ವ್ಯವಸ್ಥೆ ಮಾಡಲಾಗಿದ್ದರೂ ಸಂಚಾರ ಸ್ಥಗಿತಗೊಂಡಿದೆ. ಆಗುಂಬೆ, ಮಲ್ಲಂದೂರು, ಅಗಸರ ಕೋಣೆ, ಮಳಲಿ, ಕೌರಿಹಕ್ಕಲು, ಗಾರ್ಡರಗದ್ದೆ, ತಲ್ಲೂರು, ಹೊಸೂರು, ಗುಡ್ಡೇಕೇರಿ,ಬಿಳಚಿಕಟ್ಟೆ, ನಾಲೂರು, ಮಳುವಾಡಿ, ಇಳಿಮನೆ, ಶಿವಳ್ಳಿ, ಹುರುಳಿ, ಕೊಳಗಿ, ಮೊಡುಕೊಳಗಿ, ಶೀರೂರು, ಕೆರೋಡಿ, ಆಂದಿನಿ, ಮೇಗರವಳ್ಳಿ, ಲಕ್ಕುಂದ ಹೀಗೆ ಅನೇಕ ಊರುಗಳ ಜನರು ತೊಂದರೆಗೆ ಸಿಲುಕಿದ್ದಾರೆ.

ಸೋಮೇಶ್ವರ ವನ್ಯಜೀವಿ ವಿಭಾಗದ ಸ್ಥಳೀಯ ಅಧಿಕಾರಿಗಳ ಆಕ್ಷೇಪಣೆ ರಸ್ತೆ ಕಾಮಗಾರಿಯ ವಿಳಂಬದ ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂದಾಜು ವರದಿ ಅನ್ವಯ ಕಾಮಗಾರಿ ಅನುಷ್ಠಾನ ಕ್ಷೀಣಿಸಿದೆ. ಅಭಯಾರಣ್ಯ, ಹೆದ್ದಾರಿ ಪ್ರಾಧಿಕಾರದ ನಡುವಿನ ತಿಕ್ಕಾಟ ಸಾರ್ವಜನಿಕರ ಪ್ರಯಾಣಕ್ಕೆ ಸಂಚಕಾರ ತಂದೊಡ್ಡಿದೆ.

ಘಾಟಿ ರಸ್ತೆಯ ಅನೇಕ ತಿರುವುಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಅನಿವಾರ್ಯವಾಗಿದೆ. ರಸ್ತೆ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದ ಪರಿಣಾಮ ಚರಂಡಿ, ತಡೆಗೋಡೆಗಳು ಶಿಥಿಲಗೊಂಡಿವೆ. 2014ರಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಈ ರಸ್ತೆ ಮಾರ್ಗ ಸೇರ್ಪಡೆಗೊಂಡ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೃಂಗೇರಿ ಉಪ ವಿಭಾಗ ದುರಸ್ತಿ ಕಾಮಗಾರಿ ಆರಂಭಿಸಿದೆ. ರಸ್ತೆ ದುರಸ್ತಿಗೆ ಸಮಯ ನಿಗದಿಗೊಳಿಸಿ ಕಾಮಗಾರಿ ಆರಂಭ ಮಾಡಿದ್ದರೂ ಸೋಮೇಶ್ವರ ವನ್ಯ ಜೀವಿ ಅಭಯಾರಣ್ಯದ ಆಕ್ಷೇಪಣೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಭಾನುವಾರದಿಂದ ಪುನರಾರಂಭ ಮಾಡಲಾಗಿದೆ. ಮೇ 15ರ ಹೊತ್ತಿಗೆ ವಾಹನ ಸಂಚಾರಕ್ಕೆ ಘಾಟಿ ಮಾರ್ಗದಲ್ಲಿ ಅವಕಾಶ ಲಭ್ಯವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಆಗುಂಬೆ ಮಾರ್ಗದ ಸಂಚಾರಕ್ಕೆ ತಾತ್ಕಾಲಿಕ ಬದಲಿ ವ್ಯವಸ್ಥೆಯನ್ನು ಸ್ಥಳೀಯ ಪ್ರಯಾಣಿಕರು ಅವಲಂಬಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT