ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಸಿಬ್ಬಲುಗುಡ್ಡೆ ಮತ್ಸಧಾಮದ ಮೀನುಗಳಿಗೆ ಆಹಾರದ ಕೊರತೆ

ಮತ್ಸ್ಯ ಸಂತತಿಯ ಮೂಕರೋಧನೆಗೆ ಮಿಡಿದ ಜನ
Last Updated 3 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೊರೊನಾ ಭೀತಿಯಿಂದ ಲಾಕ್‌ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಲ್ಲದೇ ಭಣಗುಡುತ್ತಿರುವ ಸಿಬ್ಬಲುಗುಡ್ಡೆಯ ಮತ್ಸ್ಯಧಾಮದ ದೇವರ ಮೀನುಗಳಿಗೆ ಆಹಾರದ ಕೊರತೆಯುಂಟಾಗಿದೆ.

ತೀರ್ಥಹಳ್ಳಿಯಿಂದ ಹೆದ್ದೂರು, ಕಟ್ಟೆಹಕ್ಕಲು ಮಾರ್ಗದಲ್ಲಿ 10 ಕಿ.ಮೀ ದೂರ ಕ್ರಮಿಸಿದರೆ ಸಿಬ್ಬಲಗುಡ್ಡೆ ಸಿಗುತ್ತದೆ. ತಾಲ್ಲೂಕಿನ ಮೇಳಿಗೆ ಬಳಿಯ ಸಿಬ್ಬಲಗುಡ್ಡೆ ದಬ್ಬಣಗದ್ದೆ, ನಂಬಳ ಗ್ರಾಮದ ನಡುವಿನ ತುಂಗಾ ನದಿಯಲ್ಲಿ ಬಗೆಬಗೆಯ ಮೀನಿನ ರಾಶಿ ನೋಡುಗರ ಚಿತ್ತ ಕಲಕುತ್ತದೆ. ಅಳಿವಿನ ಅಂಚಿನಲ್ಲಿರುವ ಅಪರೂಪದ ಮತ್ಸ್ಯಸಂತತಿ ಈ ಪ್ರದೇಶದಲ್ಲಿ ನೆಲೆ ಕಂಡುಕೊಂಡಿದೆ.

ಪ್ರವಾಸಿಗರು ನೀಡುತ್ತಿರುವ ಮಂಡಕ್ಕಿ, ಅಕ್ಕಿ, ಅವಲಕ್ಕಿ, ದವಸ, ಧಾನ್ಯ ಮುಂತಾದ ಆಹಾರವನ್ನೇ ನೆಚ್ಚಿಕೊಂಡಿದ್ದ ಮೀನುಗಳು ಆಹಾರವಿಲ್ಲದೇ ನಲುಗಿ ಹೋಗಿವೆ. ಆದರೆ, ಮೀನುಗಳ ಮೂಕರೋಧನೆಗೆ ಸ್ಪಂದಿಸಿದ ಸಮಾಜ ಸೇವಕ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ರೋಟರಿ ಸಂಸ್ಥೆಯ ಕೆ.ಪಿ.ಎಸ್.ಸ್ವಾಮಿ, ಡಾ.ನಂದಕಿಶೋರ್, ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕ ರಾಘವೇಂದ್ರ, ಲಯನ್ಸ್ ಅಧ್ಯಕ್ಷ ಶಶಿಧರ್ ಮತ್ತು ಸಮಾನ ಮನಸ್ಕ ಗೆಳೆಯರ ಬಳಗ ಮೀನುಗಳಿಗೆ ಆಹಾರ ಉಣಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನದಿ ನೀರು ದಿನದಿಂದ ದಿನಕ್ಕೆ ಬತ್ತುತ್ತಿರುವುದರಿಂದ ಸಾವಿರಾರು ಬೃಹತ್ ಗಾತ್ರದ ಮೀನುಗಳಿಗೆ ಆಹಾರದ ಕೊರತೆ ಉಂಟಾಗಿತ್ತು. ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಪ್ರತಿನಿತ್ಯ ಮತ್ಸ್ಯಧಾಮಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡಿ ಮೀನುಗಳಿಗೆ ಆಹಾರ ಹಾಕಿ ಅವುಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ.

ಮಲೆನಾಡಿನ ಜನಪದರಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಮೇರು ಕೃತಿಗಳಲ್ಲಿ ಸಿಬ್ಬಲುಗುಡ್ಡೆಯ ಮತ್ಸ್ಯಧಾಮದ ಬಗ್ಗೆ ಉಲ್ಲೇಖಗಳಿವೆ. ಮತ್ಸಧಾಮದ ಸುರಕ್ಷತೆ ಕುರಿತಂತೆ ಮೀನುಗಾರಿಕೆ ಇಲಾಖೆ ಸಲ್ಲಿಸಿದ ಕೋರಿಕೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಧಿಕಾರಿ ನೀಡಿದ ಸೂಚನೆ ಮೇರೆಗೆ ಈ ಪ್ರದೇಶದಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಿದೆ.

ಅಳಿವಿನಂಚಿನಲ್ಲಿರುವ ಮಹಶೀರ್, ಪಂಟಯಾಸ್ ಮೀನುಗಳ ವಾಸಸ್ಥಾನವಾಗಿರುವ ಈ ಪ್ರದೇಶ ಸುಮಾರು 27ಕ್ಕೂ ಅಧಿಕ ಸಂಖ್ಯೆಯ ಮೀನಿನ ಸಂತತಿಯನ್ನು ಒಳಗೊಂಡಿದೆ. ಭಾರತೀಯ ನೈಸರ್ಗಿಕ ಸಮೀಕ್ಷೆ, ಮೀನುಗಳ ಸಂತತಿ ರಾಷ್ಟ್ರೀಯ ಘಟಕ ಸಂಶೋಧನೆಯಲ್ಲಿ ಮಹಶೀರ್, ಪೆಂಟಯಸ್ ತಳಿಯ ಮೀನು ಅಳಿವಿನ ಅಂಚಿನಲ್ಲಿವೆ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT