ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರು, ಗ್ರಾಮಸ್ಥರ ತಿಕ್ಕಾಟಕ್ಕೆ ನಲುಗಿದ ಆರೋಗ್ಯ ಕೇಂದ್ರ

ಕಟಗಾರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಪ್ರತ್ಯೇಕ ಬೀಗ
Last Updated 18 ಅಕ್ಟೋಬರ್ 2019, 13:34 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ವೈದ್ಯರ ಹಾಗೂ ಗ್ರಾಮಸ್ಥರ ತಿಕ್ಕಾಟದಿಂದಾಗಿ ತಾಲ್ಲೂಕಿನ ಕಟಗಾರು (ಕಟ್ಟೆಹಕ್ಕಲು) ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಎರಡು ಬೀಗ ಬಿದ್ದಿವೆ.

ಸಮಯಕ್ಕೆ ಸರಿಯಾಗಿ ವೈದ್ಯರು ಆಸ್ಪತ್ರೆಗೆ ಬರುತ್ತಿಲ್ಲ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳೊಂದಿಗೆ ಅನುಚಿತ ವರ್ತನೆ ಮಾಡುತ್ತಿರುವ ವೈದ್ಯರನ್ನು ಆಸ್ಪತ್ರೆಯಿಂದ ಹೊರಹಾಕಬೇಕು ಎಂಬ ಹಲವು ದಿನಗಳ ಆಗ್ರಹವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸದೇ ಇರುವುದು ಗ್ರಾಮಸ್ಥರನ್ನು ಕೆರಳಿಸುವಂತೆ ಮಾಡಿದೆ.

ಆರೋಗ್ಯ ಕೇಂದ್ರಕ್ಕೆಗುರುವಾರ ಮಧ್ಯಾಹ್ನ 12.30ಕ್ಕೆ ಬಂದ ವೈದ್ಯರು 1 ಗಂಟೆ ಹೊತ್ತಿಗೆ ಆಸ್ಪತ್ರೆಗೆ ಬೀಗ ಹಾಕಿ ತೆರಳಿದರು. ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು ಇದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ವೈದ್ಯರ ವರ್ತನೆ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ಆಸ್ಪತ್ರೆಗೆ ಮತ್ತೊಂದು ಬೀಗ ಹಾಕಿ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಆಸ್ಪತ್ರೆ ವ್ಯಾಪ್ತಿಯ ವಿವಿಧ ಹಳ್ಳಿಗಳ ರೋಗಿಗಳಿಗೆವೈದ್ಯರು ಚಿಕಿತ್ಸೆ ನೀಡುವ ಉದ್ದೇಶದಿಂದ ಆಸ್ಪತ್ರೆಗೆ ಬೀಗಹಾಕಿ ತೆರಳಿರುವುದನ್ನು ಗ್ರಾಮಸ್ಥರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೂ ಗ್ರಾಮಸ್ಥರು ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ವೈದ್ಯರು ಹಿರಿಯ ಅಧಿಕಾರಿ ಬಳಿ ಹೇಳಿಕೊಂಡಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಯಿತು.

ವೈದ್ಯರು ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳುಲು ಪ್ರಯತ್ನಿಸುತ್ತಿದ್ದಾರೆ. ಆಸ್ಪತ್ರೆಗೆ ಇಂಥಹ ವೈದ್ಯರ ಅಗತ್ಯವಿಲ್ಲ. ಹಿಂದೆ ಸೇವೆ ಸಲ್ಲಿಸಿದ ವೈದ್ಯರನ್ನು ಗ್ರಾಮದ ಜನರು ಗೌರವದಿಂದ ನಡೆಸಿಕೊಂಡಿದ್ದಾರೆ. ಜನರಿಗೆ ಉತ್ತಮ ಅರೋಗ್ಯ ಸೇವೆ ನೀಡುವ ಬೇರೆ ವೈದ್ಯರನ್ನು ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಒಂದು ವಾರದೊಳಗೆ ಬೇರೆ ವೈದ್ಯರನ್ನು ನೇಮಕ ಮಾಡಲು ಕ್ರಮಕೈಕೊಗ್ಗಲಾಗುವುದು ಎಂದು ಭರವಸೆ ನೀಡಿದರು.

ಆಸ್ಪತ್ರೆಗೆ ಹಾಕಿರುವ ಬೀಗವನ್ನು ತೆಗೆಯುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕೊಟ್ಟ ಭರವಸೆ ಈಡೇರಿಸದೇ ಇದ್ದರೆ ಆಸ್ಪತ್ರೆಗೆ ಬೀಗ ಹಾಕಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿ ಆಸ್ಪತ್ರೆಗೆ ಹಾಕಿದ್ದ ಬೀಗವನ್ನು ಗ್ರಾಮಸ್ಥರು ತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT