ಸೋಲಿನ ಭೀತಿಯಿಂದ ಷಡ್ಯಂತ್ರ: ಬಿಜೆಪಿ ಆರೋಪ

7
ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದಿದ್ದಕ್ಕೆ ಬೆದರಿಕೆಯೇ ಕಾರಣ: ರುದ್ರೇಶ್‌

ಸೋಲಿನ ಭೀತಿಯಿಂದ ಷಡ್ಯಂತ್ರ: ಬಿಜೆಪಿ ಆರೋಪ

Published:
Updated:
Deccan Herald

ರಾಮನಗರ: ‘ಸಹೋದರರಾದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್‌ ಒತ್ತಡದಿಂದಾಗಿಯೇ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ರಾಮನಗರ ಕ್ಷೇತ್ರದಾದ್ಯಂತ ಜೆಡಿಎಸ್–ಕಾಂಗ್ರೆಸ್‌ ಮೈತ್ರಿಗೆ ವಿರೋಧ ವ್ಯಕ್ತವಾಗಿದ್ದು, ಸಾಕಷ್ಟು ಮಂದಿ ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದ್ದರು. ಅನಿತಾ ಅವರು ಪ್ರಚಾರಕ್ಕೆ ತೆರಳಿದ್ದ ಕಡೆಯಲ್ಲೆಲ್ಲ ಅವರಿಗೆ ಮತದಾರರಿಂದ ವಿರೋಧ ವ್ಯಕ್ತವಾಗುತ್ತಿತ್ತು. ಗುಪ್ತಚರ ಇಲಾಖೆ ಕೂಡ ಜೆಡಿಎಸ್ ಸೋಲಿನ ವರದಿ ನೀಡಿತ್ತು. ಇದರಿಂದ ಆತಂಕಗೊಂಡು ನಮ್ಮ ಅಭ್ಯರ್ಥಿಯನ್ನು ಸೆಳೆದಿದ್ದಾರೆ’ ಎಂದು ಅವರು ದೂರಿದರು.

‘ಡಿಕೆಎಸ್ ಸಹೋದರರ ವರ್ತನೆಯಿಂದ ಬೇಸತ್ತು ಬಿಜೆಪಿ ಸೇರುತ್ತಿರುವುದಾಗಿ ಚಂದ್ರಶೇಖರ್ ಹೇಳಿಕೊಂಡಿದ್ದರು. ಬುಧವಾರವೂ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ರಾತ್ರಿಯೂ ದೂರವಾಣಿ ಕರೆ ಮಾಡಿ ನಾಳೆ ಪ್ರಚಾರದ ಬಗ್ಗೆ ಚರ್ಚಿಸಿದ್ದರು. ಹೀಗೆ ಏಕಾಏಕಿ ನಿರ್ಧಾರ ಬದಲಿಸಿರುವುದನ್ನು ನೋಡಿದರೆ ಅವರಿಗೆ ದೊಡ್ಡ ಬೆದರಿಕೆಯೇ ಬಂದಿರಬಹುದು. ಪ್ರಚಾರದ ವೇಳೆಯೂ ಅನೇಕ ಬಾರಿ ಅವರು ಡಿಕೆಎಸ್ ಸಹೋದರಿಂದ ಬೆದರಿಕೆ ಇರುವುದಾಗಿ ನನ್ನ ಬಳಿ ಹೇಳಿಕೊಂಡಿದ್ದರು’ ಎಂದರು.

‘ಕಾಂಗ್ರೆಸ್‌–ಜೆಡಿಎಸ್ ನೇರವಾಗಿ ಯದ್ಧ ಮಾಡದೇ ಹೀಗೆ ಹಿಂಬಾಗಿಲ ರಾಜಕಾರಣ ಮಾಡಿದೆ. ಇದು ಇಡೀ ರಾಮನಗರದ ಜನತೆಗೆ ಮಾಡಿದ ದ್ರೋಹ. ಕ್ಷೇತ್ರದ ಕಾರ್ಯಕರ್ತರು ಎದೆಗುಂದದೇ, ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸಬೇಕು. ಅವರು ಗೆದ್ದರೆ ರಾಜೀನಾಮೆ ನೀಡಿಯೇ ಕಾಂಗ್ರೆಸ್‌ಗೆ ಹೋಗಬೇಕು’ ಎಂದು ಹೇಳಿದರು.

‘ಯೋಗೇಶ್ವರ್‌–ಚಂದ್ರಶೇಖರ್‌ ನಡುವೆ ಯಾವ ಭಿನ್ನಾಭಿಪ್ರಾಯ ಇತ್ತೋ ಗೊತ್ತಿಲ್ಲ. ಈ ನಡೆಯಿಂದ ಅವರಿಗೂ ಬೇಜಾರಾಗಿದೆ. ಅನ್ಯ ಪಕ್ಷದಿಂದ ಕರೆತಂದು ಅಭ್ಯರ್ಥಿಯಾಗಿ ಮಾಡುವ ಮುನ್ನ ಯೋಗೇಶ್ವರ್‌ ಯೋಚಿಸಬೇಕಿತ್ತು’ ಎಂದರು.

‘ಪ್ರಮುಖ ರಾಜಕೀಯ ನಾಯಕರು ಪ್ರಚಾರಕ್ಕೆ ಬರಲಿಲ್ಲ ಎನ್ನುವುದು ಸುಳ್ಳು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮುಖಂಡರಾದ ಸಿ.ಪಿ, ಯೋಗೇಶ್ವರ್‌, ಸುರೇಶ್‌ಕುಮಾರ್, ಅಶ್ವಥ್‌ನಾರಾಯಣ್‌, ಕೆ. ಶಿವರಾಂ, ಮುನಿರಾಜೇಗೌಡ ಸೇರಿದಂತೆ ಹಲವರು ಸಕ್ರಿಯರಾಗಿ ಮತಯಾಚನೆ ಮಾಡಿದ್ದರು. ರಾಮನಗರದಲ್ಲಿ ಸಮಾವೇಶ ನಡೆಸಲು ಬಿ.ಎಸ್. ಯಡಿಯೂರಪ್ಪ ಇದೇ 28ಕ್ಕೆ ದಿನಾಂಕ ನೀಡಿದ್ದರು. ಆದರೆ ಚಂದ್ರಶೇಖರ್ ಅವರೇ 31ಕ್ಕೆ ಸಮಾವೇಶ ನಡೆಸುವಂತೆ ಕೋರಿದ್ದರು’ ಎಂದು ಸ್ಪಷ್ಟನೆ ನೀಡಿದರು.

**

ಚುನಾವಣಾ ಕಣದಲ್ಲಿ ಇದ್ದ ಅಭ್ಯರ್ಥಿಯನ್ನು ಹಿಂದೆ ಸರಿಸುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಶಿವಕುಮಾರ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ.
–ಎಂ. ರುದ್ರೇಶ್‌, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !