‘ಟಿಪ್ಪು ವಿರೋಧಿಗಳಿಂದ ಕೋಮು ಸೌಹಾರ್ದಕ್ಕೆ ಧಕ್ಕೆ’

7
ಪೊಲೀಸ್ ಭದ್ರತೆಯೊಂದಿಗೆ ಟಿಪ್ಪು ಜಯಂತಿ ಆಚರಣೆ

‘ಟಿಪ್ಪು ವಿರೋಧಿಗಳಿಂದ ಕೋಮು ಸೌಹಾರ್ದಕ್ಕೆ ಧಕ್ಕೆ’

Published:
Updated:
Deccan Herald

ರಾಮನಗರ: ‘ಟಿಪ್ಪು ಸುಲ್ತಾನ್ ವಿಚಾರದಲ್ಲಿ ಕಳೆದೊಂದು ದಶಕದಿಂದ ಇತಿಹಾಸವನ್ನು ತಿರುಚಲಾಗುತ್ತಿದೆ. ಈ ಮೂಲಕ ಹಿಂದೂ ಮುಸಲ್ಮಾನರ ನಡುವಿನ ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನ ನಡೆದಿದೆ’ ಎಂದು ಸಾಹಿತಿ ಬೈರಮಂಗಲ ರಾಮೇಗೌಡ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು. ‘1970–80ರ ದಶಕದಲ್ಲಿ ನಾವೆಲ್ಲ ಓದುವ ಸಂದರ್ಭ ಟಿಪ್ಪು ಮೈಸೂರು ಹುಲಿ ಎಂತಲೂ, ಆತ 17 ವರ್ಷಗಳ ಆಳ್ವಿಕೆಯಲ್ಲಿ ಬ್ರಿಟಿಷರ ವಿರುದ್ಧ ಎಷ್ಟೆಲ್ಲ ಹೋರಾಡಿದ, ಏನೆಲ್ಲ ಅಭಿವೃದ್ಧಿ ಮಾಡಿದ ಎಂಬುದು ತಿಳಿದಿತ್ತು. ಆದರೆ ಇಂದು ಆತನನ್ನು ಮತಾಂಧ ಎಂದು, ಕನ್ನಡದ ವಿರೋಧಿ ಎಂದೂ ತಪ್ಪಾಗಿ ಬಿಂಬಿಸುತ್ತಿರುವುದರ ಹಿಂದೆ ಕುತಂತ್ರ ಅಡಗಿದೆ’ ಎಂದು ದೂರಿದರು.

‘ಟಿಪ್ಪು ಮತಾಂಧ ಎಂದು ಕೆಲವು ಅಂಕಣಕಾರರು ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುಳ್ಳುಗಳನ್ನೇ ಹೆಚ್ಚೆಚ್ಚು ಪ್ರಚುರಪಡಿಸಲಾಗುತ್ತಿದೆ. ಟಿಪ್ಪು ಬಗ್ಗೆ ಒಳ್ಳೆಯದನ್ನು ಬರೆದವರನ್ನು ಟೀಕಿಸಲೆಂದೇ ಒಂದು ಗುಂಪು ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

‘ಹಿಂದುತ್ವವಾದಿಗಳು ಎಂದು ಹೇಳಿಕೊಳ್ಳುವ ಮರಾಠರು ಶೃಂಗೇರಿಯ ಮಠಕ್ಕೆ ನುಗ್ಗಿ ದೇಗುಲವನ್ನು ಧ್ವಂಸಗೊಳಿಸಿದಾಗ ಅದನ್ನು ಜೀರ್ಣೋದ್ಧಾರಗೊಳಿಸಿದ್ದು ಇದೇ ಟಿಪ್ಪು. ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ಭವ್ಯವಾಗಿ ಉಳಿದ ಶ್ರೀರಂಗನ ಸನ್ನಿಧಿಯು ಆತನ ಧರ್ಮ ಸಹಿಷ್ಣುತೆಗೆ ಸಾಕ್ಷಿ’ ಎಂದು ಅವರು ವಿವರಿಸಿದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಮಾತನಾಡಿ ‘ಟಿಪ್ಪುವನ್ನು ವಿರೋಧಿಸುವವರು ಮೊದಲು ಇತಿಹಾಸ ಓದಬೇಕು. ಕೋಮು ಪ್ರಚೋದನೆ ಮಾಡಬಾರದು’ ಎಂದರು.

‘ಟಿಪ್ಪು ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಶ್ರೀರಂಗನಾಥ ಸ್ವಾಮಿಯ ಅಪ್ಪಟ ಭಕ್ತ. ಕೆಆರ್‌ಎಸ್‌ ಜಲಾಶಯ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿದ್ದು, ಕೇರಳದ ಮಹಿಳೆಯರ ಮಾನರಕ್ಷಣೆಗೆ ನಿಂತಿದ್ದು ಆತನ ಆಡಳಿತಕ್ಕೆ ಹಿಡಿದ ಕನ್ನಡಿ. ಇದೇ 20 ಅಥವಾ 22ರಂದು ಅವರ ಅಭಿಮಾನಿ ಬಳಗದಿಂದ ಮತ್ತೊಮ್ಮೆ ಟಿಪ್ಪು ಜಯಂತಿಯನ್ನೂ ಅದ್ದೂರಿಯಾಗಿ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜು, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್‌, ನಗರಸಭೆ ಅಧ್ಯಕ್ಷೆ ರತ್ನಮ್ಮ ಪಾಪಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಗಲ್‌ ನಟರಾಜು, ಜಿಲ್ಲಾಧಿಕಾರಿ ಬಿ. ರಾಜೇಂದ್ರ, ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌, ಎಸ್ಪಿ ಬಿ. ರಮೇಶ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ ಇದ್ದರು.

ದೊಡ್ಡಾಲಹಳ್ಳಿಯ ಪರಿವರ್ತನಾ ತಂಡದವರು ಪ್ರಾರ್ಥಿಸಿದರು. ಚಿತ್ರಾ ರಾವ್‌ ಮತ್ತು ಸಂಗಡಿಗರು ನೃತ್ಯ ಪ್ರಸ್ತುತಪಡಿಸಿದರು. ಉಪ ವಿಭಾಗಾಧಿಕಾರಿ ಟಿ.ಎನ್. ಕೃಷ್ಣಮೂರ್ತಿ ಸ್ವಾಗತಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ. ರಾಜು ವಂದಿಸಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ಬಿಜೆಪಿ ವಿರುದ್ಧ ಸುರೇಶ್‌ ಕಿಡಿ
ಸಂಸದ ಡಿ.ಕೆ. ಸುರೇಶ್‌ ಮಾತನಾಡಿ ‘ರಾಜ್ಯ ಸರ್ಕಾರ 22 ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಈ ಜಯಂತಿಗೆ ಮಾತ್ರ ಕೆಲವರು ಬೇಕೆಂತಲೇ ವಿರೋಧ ವ್ಯಕ್ತಪಡಿಸುತ್ತಾರೆ. ಈ ಮೂಲಕ ನಾಯಕರಾಗಿ ಗುರುತಿಸಿಕೊಳ್ಳುವ ಆಸೆ ಅವರಿಗೆ ಇದ್ದಂತಿದೆ’ ಎಂದು ಟೀಕಿಸಿದರು.

‘ಬಿಜೆಪಿಯವರು ಕಾಮಾಲೆ ಕಣ್ಣಿನ ಜೊತೆಗೆ ಎಕ್ಸ್‌ರೇಯಂತಹ ಕನ್ನಡಕ ಧರಿಸಿ ಟಿಪ್ಪುವನ್ನು ಬೆತ್ತಲಾಗಿ ನೋಡುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ದೇಶದಲ್ಲಿ ರಾಮಾಯಣ, ಮಹಾಭಾರತದಿಂದ ಹಿಡಿದು ಎಲ್ಲವೂ ಪ್ರಶ್ನಾರ್ಹವೇ. ನಂಬುವುದು ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು. ಈ ಮೊದಲು ಟಿಪ್ಪುವಿನ ಕೀರ್ತಿ ಕರ್ನಾಟಕಕ್ಕೆ ಸೀಮಿತವಾಗಿದ್ದು, ಬಿಜೆಪಿಯವರ ಟೀಕೆಯಿಂದಾಗಿ ಅವರ ಕೀರ್ತಿ ವಿಶ್ವವ್ಯಾಪಿಯಾಗುತ್ತಿದೆ. ಇದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಬೇಕು’ ಎಂದರು.

ಅನಿತಾ ಗೈರು: ಕಾಣದ ಜೆಡಿಎಸ್ ಮುಖಂಡರು
ಈಚೆಗಷ್ಟೇ ಶಾಸಕಿಯಾಗಿ ಆಯ್ಕೆಯಾದ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿನ ತಮ್ಮ ಮೊದಲ ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರೇ ಹೆಚ್ಚಿದ್ದು, ಜೆಡಿಎಸ್ ಕಾರ್ಯಕರ್ತರು ಕಾಣಿಸಿಕೊಳ್ಳಲಿಲ್ಲ.

ಬಿಗಿಭದ್ರತೆ: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರ ಬಿಗಿ ಭದ್ರತೆ ನಡುವೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಭವನ ಹಾಗೂ ಸುತ್ತಮುತ್ತ ಹತ್ತಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

* ದೇಶಕ್ಕಾಗಿ ಮಕ್ಕಳನ್ನೇ ಒತ್ತೆ ಇಟ್ಟ ದೇಶಪ್ರೇಮಿ ಟಿಪ್ಪು. ಕ್ಷಿಪಣಿ ಪ್ರಯೋಗ ತಂತ್ರಜ್ಞಾನವು ಆತನ ಪ್ರಮುಖ ಕೊಡುಗೆಗಳಲ್ಲಿ ಒಂದು
-ಬೈರಮಂಗಲ ರಾಮೇಗೌಡ, ಸಾಹಿತಿ

* ಬಿಜೆಪಿಯವರ ವಿರೋಧದಿಂದಾಗಿ ಇಂದು ಟಿಪ್ಪು ಹೆಸರು ವಿಶ್ವವ್ಯಾಪಿ ಜನಪ್ರಿಯವಾಗುತ್ತಿದೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು
-ಡಿ.ಕೆ. ಸುರೇಶ್
ಸಂಸದ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !