ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ರದ್ದು ಪಡಿಸಲು ಒತ್ತಾಯಿಸಿ ಸತ್ಯಾಗ್ರಹ

ಲೋಕಾಯುಕ್ತವನ್ನು ಬಲಗೊಳಿಸಿ ಭ್ರಷ್ಟಾಚಾರವನ್ನು ತಡೆಗಟ್ಟಲು ಒತ್ತಾಯ
Last Updated 16 ನವೆಂಬರ್ 2018, 13:33 IST
ಅಕ್ಷರ ಗಾತ್ರ

ಚನ್ನಪಟ್ಟಣ: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಪಡಿಸಿ ಲೋಕಾಯುಕ್ತವನ್ನು ಬಲಗೊಳಿಸಿ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ನ.17ರಂದು ಒಂದು ದಿನದ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಸಮಿತಿ ಸದಸ್ಯ ಎಚ್.ಎಸ್.ಲಿಂಗೇಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಂಸದ ಕೆ.ಆರ್.ಪೇಟೆ ಕೃಷ್ಣ, ಜನಸಂಗ್ರಾಮ ಪರಿಷತ್ತಿನ ರಾಘವೇಂದ್ರ ಕುಷ್ಟಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವುದಾಗಿ ಹೇಳಿದ್ದರು. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 6 ತಿಂಗಳು ಕಳೆಯುತ್ತಾ ಬಂದರೂ ಲೋಕಾಯುಕ್ತದ ಬಗ್ಗೆ ಮಾತನಾಡುತ್ತಿಲ್ಲ. ಈಗ ಆಡಳಿತದಲ್ಲಿ ಲಂಚ, ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪಗಳು ಹಿಂದಿಗಿಂತ ಹೆಚ್ಚು ನಡೆಯುತ್ತಿವೆ ಎಂದು ಟೀಕಿಸಿದರು.

ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಎಸಿಬಿ ಅನ್ನು ರದ್ದು ಪಡಿಸಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ಈ ಮೊದಲಿನಂತೆ ಲೋಕಾಯುಕ್ತದ ಸುಪರ್ದಿಗೆ ತಂದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆಯನ್ನು ತುಂಬಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ರಾಮು ಮಾತನಾಡಿ, ಈ ಹೋರಾಟಕ್ಕೆ ರೈತ ಸಂಘದ ಸಂಪೂರ್ಣ ಬೆಂಬಲವಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳ ಮಾತು ಈವರೆವಿಗೆ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ತಪ್ಪಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ, ಸಿ.ಎನ್.ರುದ್ರಪ್ಪ, ತಿಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT