ಟೆಂಟ್‌ನಲ್ಲಿ ಭಯಗ್ರಸ್ತ ಜನರು

7
ಜ್ಯೋತಿಷಿ ಮಾತು ನಂಬಿ ಜೀವಭಯದಿಂದ ಊರು ಬಿಟ್ಟವರು

ಟೆಂಟ್‌ನಲ್ಲಿ ಭಯಗ್ರಸ್ತ ಜನರು

Published:
Updated:
Deccan Herald

ತೀರ್ಥಹಳ್ಳಿ: ಅಪರೂಪದ ಖಗ್ರಾಸ ಚಂದ್ರಗ್ರಹಣದ ದೋಷದಿಂದ ಕುಟುಂಬದಲ್ಲಿ ಸರಣಿ ಸಾವು ಸಂಭವಿಸುತ್ತದೆ ಎಂಬ ಜ್ಯೋತಿಷಿಯ ಮಾತು ನಂಬಿ ಜೀವಭಯದಿಂದ ಊರು ಬಿಟ್ಟ ಹಲವು ಕುಟುಂಬಗಳು ಈಗ ಕಷ್ಟಕ್ಕೆ ಸಿಲುಕಿವೆ. ಮತ್ತೆ ವಾಪಸ್‌ ಮರಳಲು ಭಯಪಡುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಿ.ಎಚ್. ಕೈಮರ ಶೆಟ್ಟಿಕೊಪ್ಪ ಸಮೀಪದ ಸಿಗುವಾನಿ ಗ್ರಾಮದ ಅಲೆಮಾರಿ ಜನಾಂಗದ ಕುಟುಂಬಗಳು ಜ್ಯೋತಿಷಿ ಮಾತು ಕೇಳಿ ಸಮಸ್ಯೆಗೆ ಸಿಲುಕಿದ್ದಾರೆ.

ಒಂದಿಷ್ಟು ಮಂದಿ ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಬಳಿ ಇರುವ ಟೆಂಟ್‌ನಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿದ್ದಾರೆ. ಈ ಕುಟುಂಬದ ಮಕ್ಕಳು ಶಾಲೆ ತ್ಯಜಿಸಿ ಟೆಂಟ್ ಸೇರಿದ್ದಾರೆ. ಊರು ಬಿಟ್ಟ ಕುಟುಂಬಗಳಲ್ಲಿನ ಅನೇಕರು ದಿಕ್ಕಾಪಾಲಾಗಿ ಹೋಗಿದ್ದಾರೆ. ಬೆಜ್ಜವಳ್ಳಿಯಲ್ಲಿ 30 ಮಂದಿ ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸವಿದ್ದಾರೆ. 10ಕ್ಕೂ ಹೆಚ್ಚು ಚಿಕ್ಕ ಪ್ರಾಯದ ಮಕ್ಕಳು ಅನಾರೋಗ್ಯದಿಂದ ನರಳುತ್ತಿದ್ದಾರೆ.

10ಕ್ಕೂ ಹೆಚ್ಚು ಗಂಡಸರು, 12ಕ್ಕೂ ಹೆಚ್ಚು ಮಹಿಳೆಯರು, 10 ಮಕ್ಕಳು ಇರುವ ಈ ಕುಟುಂಬಗಳಿಗೆ ಉದ್ಯೋಗವಿಲ್ಲದಂತಾಗಿದೆ. ಮಕ್ಕಳು ದಿಕ್ಕುಕಾಣದೇ ಟೆಂಟ್ ಸುತ್ತ ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ. 

ಗ್ರಹಣದ ಹಿಂದಿನ ದಿನ ಊರು ಬಿಟ್ಟ ಕುಟುಂಬಗಳು ಹರಿದು ಹಂಚಿ ಹೋಗಿವೆ. ಹಲವು ಮಂದಿ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ತೀರ್ಥಹಳ್ಳಿ ಸೇರಿದ್ದಾರೆ ಎಂದು ಬೆಜ್ಜವಳ್ಳಿಯಲ್ಲಿರುವ ಈ ಕುಟುಂಬದ ಸದಸ್ಯರಾದ ಲಕ್ಷ್ಮಣ್, ಉಮೇಶ್ ಹೇಳುತ್ತಾರೆ. ‌

40 ವರ್ಷಗಳಿಂದ ವಾಸವಿದ್ದ ಒಂದೇ ಊರಿನಲ್ಲಿ ವಾಸವಿದ್ದ ಇವರೆಲ್ಲರೂ ಕೂಲಿ ಕೆಲಸ, ಮೀನು ಹಿಡಿಯುವ, ವಾಹನಗಳಿಗೆ ಸರಕು ತುಂಬಿಸುವ ಕಾರ್ಯ ಮಾಡುತ್ತಿದ್ದರು. ಆದರೆ, ಗ್ರಹಣದ ನಂತರ ಕುಟುಂಬದಲ್ಲಿ ಸರಣಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು ಎಂಬ ಜ್ಯೋತಿಷಿಯ ಮಾತು ಈ ಕುಟುಂಬಗಳ ಮೇಲೆ ಗಾಢ ಪರಿಣಾಮ ಬೀರಿತ್ತು.

ಕುಟುಂಬದಲ್ಲಿ ಸಾವು ಸಂಭವಿಸಿದರೆ ಗತಿ ಏನು? ವಾಪಸ್‌ ಊರಿಗೆ ಹೋಗಿ ಮೃತಪಡುವಂತಾದರೆ ಆ ಊರು ಬೇಕೇ? ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡೇ ಈ ಕುಟುಂಬ ಸದಸ್ಯರು ಊರಿಗೆ ವಾಪಸು ಬರಲು ಧೈರ್ಯ ತೋರಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಎನ್.ಆರ್. ಪುರದಲ್ಲಿ ಬಾಳೆಗೊನೆಗಳನ್ನು ಪಿಕ್ಅಪ್ ವಾಹನಕ್ಕೆ ತುಂಬಿಸುವ ಕೆಲವರು ಸಿಗುವಾನಿ ಗ್ರಾಮಕ್ಕೆ ವಾಪಸ್‌ ಆಗಿದ್ದಾರೆ. ಆದರೆ ಮೂಲ ಸ್ಥಳದಲ್ಲಿ ಉಳಿದುಕೊಳ್ಳದೇ ಕೆಲಸ ಮುಗಿಸಿ ಸಂಜೆ ಬೆಜ್ಜವಳ್ಳಿ ಟೆಂಟ್‌ಗೆ ವಾಪಸ್‌ ಆಗುತ್ತಿದ್ದಾರೆ. ಕುಂದಾಪುರ, ತೀರ್ಥಹಳ್ಳಿಗೆ ಹೋದ ಕುಟುಂಬಗಳ ಜತೆ ಸಂಪರ್ಕ ಇಟ್ಟುಕೊಂಡವರು ಸಿಗುವಾನಿ ಗ್ರಾಮಕ್ಕೆ ಮಾತ್ರ ಹೋಗುವುದು ಬೇಡ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಸಮೀಪ ಟೆಂಟ್ ಕಟ್ಟಿಕೊಂಡು ವಾಸವಿರುವ ಕುಟುಂಬಗಳಿಗೆ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಲಿನಕೊಪ್ಪ ಹರೀಶ್ ಸ್ವಂದಿಸಿದ್ದಾರೆ. 1 ಕ್ವಿಂಟಲ್ ಅಕ್ಕಿ, ದಿನಬಳಕೆಯ ದಿನಸಿ ಸಾಮಗ್ರಿ, ಅನಾರೋಗ್ಯಕ್ಕೆ ಒಳಗಾದವರಿಗೆ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಸುರೇಶ್ ಅವರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಆನಂದಪ್ಪನಾಯ್ಕ್, ಸದಸ್ಯ ಹೆಬ್ಬಲಿಗೆ ಉಮೇಶ್, ಪಿಡಿಒ ಅಮಿತ್ ರಾಜ್, ಆರ್ ಐ ಸ್ವಾಮಿ, ಗ್ರಾಮಲೆಕ್ಕಿಗ ರಾಘವಯ್ಯ ಭೇಟಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !