ನಿಜವಾದ ಕನ್ನಡ ಉಳಿದಿರುವುದು ರೈತರ ಮನೆಯಲ್ಲಿ

ಶನಿವಾರ, ಜೂಲೈ 20, 2019
26 °C
ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ’ ಚಂದ್ರು

ನಿಜವಾದ ಕನ್ನಡ ಉಳಿದಿರುವುದು ರೈತರ ಮನೆಯಲ್ಲಿ

Published:
Updated:
Prajavani

ಶಿವಮೊಗ್ಗ: ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ, ಯಾವ ಖಾಸಗಿ ಕಂಪನಿಗಳು ರಾಜ್ಯದಲ್ಲಿ ಭವಿಷ್ಯ ರೂಪಿಸಿಕೊಳ್ಳುತ್ತದೆಯೋ ಅವರು ಕನ್ನಡಿಗರಿಗೆ ಉದ್ಯೋಗ ನೀಡಿದಾಗ ಮಾತ್ರ ಕನ್ನಡ ಅನ್ನದ ಭಾಷೆಯಾಗಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ‘ ಚಂದ್ರು ಅಭಿಪ್ರಾಯಪಟ್ಟರು.

ಕುವೆಂಪು ರಂಗಮಂದಿರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಭಾನುವಾರ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಕಡ್ಡಾಯವಾಗಿ ಜಾರಿಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶೀಘ್ರ ಅದನ್ನು ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಅನೇಕ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. 

‘ಜನಪ್ರತಿನಿಧಿಗಳು ರಾಜ್ಯದ ನಾಡು, ನುಡಿ, ಗಡಿ ರಕ್ಷಣೆ ಮಾಡಿ ಎಂದು ಅವರನ್ನು ಆಯ್ಕೆ ಮಾಡಿರುತ್ತೇವೆ. ಆದರೆ, ಅವರಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ನಮ್ಮನ್ನು ಆಳುವ ವ್ಯವಸ್ಥೆಗೆ ಮತ್ತು ವ್ಯಾಪಾರಿ ಮನೋಭಾವದಿಂದ ವಲಸೆ ಬಂದಿರುವವರಿಗೆ ಇಚ್ಛಾಶಕ್ತಿ ಬರುವ ಹಾಗೆ ನಾವು ವಾತಾವರಣವನ್ನು ನಿರ್ಮಾಣ ಮಾಡಬೇಕು’ ಎಂದರು.  

ಅಧಿಕಾರಿಗಳಿಗೆ ಆಡಳಿತದಲ್ಲಿ ಇಚ್ಛಾಶಕ್ತಿ ಇಲ್ಲ. ಸಾರ್ವಜನಿಕರಿಗೆ ಅರಿವಿನ ಕೊರತೆಯಿಂದ ಅವರು ಭಾಷೆಯನ್ನು ಕಲಿಯಬೇಕು ಎಂಬುದನ್ನು ಮರೆತು ಮಾಧ್ಯಮವೇ ಇಂಗ್ಲಿಷ್ ಆಗಬೇಕು ಎಂಬ ಮನೋಭಾವ ಬೆಳೆಸಿಕೊಂಡಿದ್ದರಿಂದ ಸರ್ಕಾರವೂ ಕೂಡ ದಿಟ್ಟ ನಿಲುವು ತೆಗೆದುಕೊಂಡು ಅಪಾಯದ ತೀರ್ಮಾನ ತೆಗೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಚನ ಚಳವಳಿ, ದಾಸ ಚಳವಳಿ ಅದು ನಿಜವಾದ ಕನ್ನಡ ಭಾಷೆ, ಸರಳವಾದ ಭಾಷೆ, ಆಡು ಭಾಷೆ, ಜನಪದ ಗೀತೆಗಳು, ಪ್ರಾಸ ಬದ್ಧವಾದ ಕನ್ನಡ ಹೀಗೆ ಕರ್ನಾಟಕದಲ್ಲಿ ವೈವಿಧ್ಯದ ಕನ್ನಡವಿದೆ. ನಿಜವಾದ ಕನ್ನಡ ಉಳಿದಿದ್ದರೆ ಅದು ರೈತರ ಮನೆಯಲ್ಲಿ ಮತ್ತು ಮಹಿಳೆಯರಲ್ಲಿ ಎಂದರು. 

ಕೇಂದ್ರ ಸರ್ಕಾರ ರೈಲ್ವೆ ಇಲಾಖೆ, ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಆಯಾ ರಾಜ್ಯ ಭಾಷೆಗಳನ್ನು ಕಡ್ಡಾಯಗೊಳಿಸಬೇಕು. ಹಿಂದಿ ಹೇರಿಕೆಯನ್ನು ತಡೆಯಬೇಕು. ನಾಡ ಗೀತೆಯನ್ನು 2 ನಿಮಿಷಕ್ಕೆ ಕಡಿತಗೊಳಿಸುವ ಕುರಿತು ಪ್ರಾಧಿಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಜಿಲ್ಲಾಧಿಕಾರಿ ದಯಾನಂದ, ‘ಜಿಲ್ಲೆಯಲ್ಲಿ 29 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆರ್‌ಟಿಐ ನಿಂದ ಶೇ 50 ಇಳಿದಿತ್ತು. ಪ್ರತಿಷ್ಠಿತ ಶಾಲೆಗಳಿಂದ ಶೇ 40 ಇಳಿದಿತ್ತು. ಮುಂದೆ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಲೂ ಅವು ಉಳಿದಿರುತ್ತವೆಯೇ ಎಂಬ ಅನುಮಾನ ಮೂಡುತ್ತಿದೆ. ಈ ವಿಚಾರದಲ್ಲಿ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ, ಬದ್ಧತೆ ನಮಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದೆ ಅನೇಕ ಕನ್ನಡ ಪರ ವೇದಿಕೆಗಳು ಕನ್ನಡ ಭಾಷೆಗೆ ಹೊಡೆತ ಬಿದ್ದಾಗ ಹೋರಾಟ ನಡೆಸುತ್ತಿದ್ದವು. ಇಂದು ಅಂತಹ ಹೋರಾಟಗಳನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಕನ್ನಡದ ಬಗ್ಗೆ ಹೆಮ್ಮೆಯಿಂದ ಹೇಳುವ ನಮಗೆ ಅದನ್ನು ಉಳಿಸುವುದಕ್ಕೆ ನಮಗೆ ಸಾಧ್ಯವಾಗುತ್ತಿಲ್ಲ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್, ಸಾಹಿತಿ ವಿಷ್ಣುನಾಯ್ಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಸಾಹಿತಿ ಸಣ್ಣರಾಮ, ಎಸ್.ಪಿ. ಶೇಷಾದ್ರಿ, ಸಾಸ್ವೆಹಳ್ಳಿ ಸತೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !