ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 6.6 ಲಕ್ಷ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಸೂಚನೆ

ಶುದ್ಧ ನೀರು ಘಟಕ ದುರ್ಬಳಕೆ ಮಾಡಿಕೊಂಡ ಮಾಜಿ ಮೇಯರ್, ಮಾಜಿ ಉಪಮೇಯರ್, ಮಾಜಿ ಸದಸ್ಯರಿಗೆ ಆಯುಕ್ತರ ಪತ್ರ
Last Updated 8 ಜೂನ್ 2019, 13:55 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ವಿವಿಧ ಬಡಾವಣೆಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ಮಿಸಿದ 12 ಶುದ್ಧ ನೀರಿನ ಘಟಕಗಳನ್ನು ಅನಧಿಕೃತವಾಗಿ ವಶಕ್ಕೆ ಪಡೆದು ನಡೆಸಿದ ಮಾಜಿ ಮೇಯರ್, ಮಾಜಿ ಉಪಮೇಯರ್‌ಗಳು ಸೇರಿದಂತೆ ಹಲವರಿಗೆ ವಿದ್ಯುತ್ ಬಿಲ್‌ ಬಾಕಿ ಮೊತ್ತವನ್ನು ಬೆಸ್ಕಾಂಗೆ ಪಾವತಿಸಲು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಈಚೆಗೆ ಪತ್ರ ಬರೆದಿದ್ದಾರೆ.

12 ಶುದ್ಧ ನೀರಿನ ಘಟಕಗಳ ಬಾಕಿ ವಿದ್ಯುತ್ ಬಿಲ್ ಮೊತ್ತವು ₹ 6.6 ಲಕ್ಷ ಆಗಿದೆ. ಈ ಎಲ್ಲ ಮೊತ್ತವನ್ನೂ ಅನಧಿಕೃತವಾಗಿ ಘಟಕಗಳನ್ನು ವಶಕ್ಕೆ ಪಡೆದು ನಡೆಸಿದವರೇ ಪಾವತಿಸಬೇಕು. ಮೂರು ದಿನಗಳ ಒಳಗಡೆ ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ಬೆಸ್ಕಾಂಗೆ ಪಾವತಿಸಿ ರಸೀದಿ ಪಡೆದು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ಬಿಲ್ ಪಾವತಿ ಮಾಡದೇ ಇದ್ದರೆ ನಿಯಾವಳಿ ಪ್ರಕಾರ ಸಾರ್ವಜನಿಕ ಆಸ್ತಿ ದುರ್ಬಳಕೆ, ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ದುರುಪಯೋಗ ಪಡಿಸಿಕೊಂಡಿರುವ ಮೊತ್ತ ಮತ್ತು ಬೆಸ್ಕಾಂ ಬಿಲ್ ಬಾಕಿ ಮೊತ್ತವನ್ನು ವಸೂಲಿ ಮಾಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆಯುಕ್ತರು ಬರೆದ ಪತ್ರವನ್ನು ರಿಜಿಸ್ಟರ್ಡ್ ಪೋಸ್ಟ್‌ನಲ್ಲಿಯೇ ಸಂಬಂಧಪಟ್ಟವರಿಗೆ ಮೇ 28ರಂದು ಪಾಲಿಕೆ ರವಾನಿಸಿದೆ.

ಆಗಸ್ಟ್ 2018ರ ಅಂತ್ಯದವರೆಗೆ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಲು ಪತ್ರದಲ್ಲಿ ಆಯುಕ್ತರು ಸೂಚಿಸಿದ್ದಾರೆ.
ಈ ಮಾಜಿಗಳಾದ ಬಳಿಕ ಅದೇ ವಾರ್ಡ್‌ಗೆ ಆಯ್ಕೆಯಾದ ನೂತನ ಸದಸ್ಯರೂ ಹಿಂದಿನವರ ರೀತಿಯಲ್ಲೇ ಅನಧಿಕೃತವಾಗಿ ಬಳಸಿಕೊಳ್ಳುತ್ತಿರುವ ಕೆಲವರಿಗೆ ಆಯುಕ್ತರು ಪತ್ರ ಬರೆದಿದ್ದಾರೆ ಎಂದು ತಿಳಿದಿದೆ.

ಒಂದು ತಿಂಗಳ ಹಿಂದೆ ಘಟಕಗಳ ವಶ: ಮೇ 8ರಂದು ಆಯುಕ್ತರು ನಗರದಲ್ಲಿನ 21 ಘಟಕಗಳ ಮೇಲೆ ದಾಳಿ ನಡೆಸಿ ಪಾಲಿಕೆ ವಶಕ್ಕೆ ಪಡೆದಿದ್ದರು. 20 ಲೀಟರ್ ಕ್ಯಾನ್‌ಗೆ ₹ 5 ನಿಗದಿಪಡಿಸಿ ಘಟಕ ನಿರ್ವಹಣೆಗೆ ವಾಟರ್‌ಮನ್‌ ಗಳನ್ನು ನೇಮಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಅಂದರೆ ಈಗ ಘಟಕಗಳನ್ನು ದುರ್ಬಳಕೆ ಮಾಡಿಕೊಂಡರೆನ್ನಲಾದವರಿಗೆ ಪತ್ರ ಬರೆದು ವಿದ್ಯುತ್ ಬಿಲ್ ಬಾಕಿ ಮೊತ್ತ ಪಾವತಿಗೆ ಸೂಚಿಸಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿಯೇ ಆಯುಕ್ತರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT