ಸೂಕ್ಷ್ಮತೆ ಮರೆತಿದೆ ಇಂದಿನ ಪತ್ರಿಕೋದ್ಯಮ

7
‘ಅಭಿವೃದ್ಧಿ ಸಂವಹನ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಸೂಕ್ಷ್ಮತೆ ಮರೆತಿದೆ ಇಂದಿನ ಪತ್ರಿಕೋದ್ಯಮ

Published:
Updated:
Prajavani

ತುಮಕೂರು: ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಂವೇದನಾಶೀಲತೆ ಹಾಗೂ ವೈಭವೀಕರಣದ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಇಂದಿನ ಪತ್ರಿಕೋದ್ಯಮ ಈ ಸೂಕ್ಷ್ಮ ಅಂತರವನ್ನು ಮರೆತಿದೆ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಉಷಾರಾಣಿ ನಾರಾಯಣ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಸಮಾಜ ಕಾರ್ಯ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ‘ಅಭಿವೃದ್ಧಿ ಸಂವಹನ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಮಾಹಿತಿಗಿಂತಲೂ ಅಭಿಪ್ರಾಯವೇ ಹೆಚ್ಚಾಗಿದೆ. ಇದು ಪತ್ರಿಕೋದ್ಯಮದ ಮೂಲ ಸ್ವರೂಪ ಅಲ್ಲ. ಅಲ್ಲಿ ಬರುತ್ತಿರುವ ಅಭಿಪ್ರಾಯ ಸಮಾಜದ್ದೇ ಅಥವಾ ಮಾಲೀಕರದ್ದೇ ಎಂಬ ಗೊಂದಲದಲ್ಲಿ ಓದುಗ ಇದ್ದಾನೆ ಎಂದರು.

ರಾಜಕೀಯದಿಂದ ಅಪರಾಧದವರೆಗೆ ವಿವಿಧ ವಿಷಯಗಳಿಗೆ ಪ್ರತ್ಯೇಕ ವರದಿಗಾರರಿದ್ದಾರೆ. ಆದರೆ ಬಹುತೇಕ ಮಾಧ್ಯಮಗಳಲ್ಲಿ ಅಭಿವೃದ್ಧಿ ಸಂವಹನಕ್ಕಾಗಿ ವರದಿಗಾರರಿಲ್ಲದಿರುವುದು ವಿಷಾದನೀಯ. ಸಮಾಜದ ನಡುವೆ ಗುಣಮಟ್ಟದ ಚರ್ಚೆ ನಡೆದು ಶ್ರೇಷ್ಠ ಜನಾಭಿಪ್ರಾಯ ರೂಪುಗೊಳ್ಳಬೇಕು. ಇದು ಪ್ರಜಾಪ್ರಭುತ್ವದ ಯಶಸ್ಸಿಗೆ ತಳಹದಿ ಎಂದು ಹೇಳಿದರು.

ಬಡತನ ಎಂದರೆ ಕಡಿಮೆ ಆದಾಯ ಅಲ್ಲ, ಅವಕಾಶಗಳ ಕೊರತೆ. ಎಲ್ಲರಿಗೂ ಹೆಚ್ಚಿನ ಮತ್ತು ಸಮಾನ ಅವಕಾಶ ದೊರೆಯಲು ಮತ್ತು ಆ ಮೂಲಕ ಎಲ್ಲರೂ ಬಡತನದಿಂದ ಹೊರಬರಲು ಮಾಧ್ಯಮಗಳು ಸಹಕಾರಿ ಆಗಬೇಕು ಎಂದರು.

ಸಮಾಜದ ಅಭಿವೃದ್ಧಿಯನ್ನು ಆರ್ಥಿಕ ಹಾಗೂ ಸಾಮಾಜಿಕ ಮಾನದಂಡಗಳ ಮೇಲೆ ಅಳೆಯಲಾಗುತ್ತದೆ. ನಮ್ಮಲ್ಲಿ ಸಂವಹನ ಸೂಚ್ಯಂಕದ ಪರಿಕಲ್ಪನೆಯೇ ಇಲ್ಲ. ಜನರು ಎಷ್ಟು ಸಂವಹನ ಸ್ವಾತಂತ್ರ್ಯ ಹೊಂದಿದ್ದಾರೆ ಎಂಬುದು ಅಭಿವೃದ್ಧಿಯ ಪ್ರಮುಖ ಮಾನದಂಡ ಎಂದು ತಿಳಿಸಿದರು.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !