ಶುಕ್ರವಾರ, ಡಿಸೆಂಬರ್ 6, 2019
19 °C

₹ 500 ಕೋಟಿ ವಂಚನೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬೆಂಗಳೂರಿನ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ ಮಾದರಿಯಲ್ಲಿ ನಗರದ ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈ.ಲಿ ಹೆಸರಿನ ಕಂಪನಿಯು ಜನರಿಂದ ₹ 500 ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಹಮ್ಮದ್ ಅಸ್ಲಂ ಎಂಬುವವರು ಎರಡು ವರ್ಷದ ಹಿಂದೆ ನಗರದಲ್ಲಿ ಈ ಕಂಪನಿ ಆರಂಭಿಸಿದ್ದರು. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಈಗ ದುಬೈಗೆ ಪರಾರಿಯಾಗಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡ ನಿಸಾರ್ ಅಹಮ್ಮದ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಆರೋಪಿಯು ನಗರದ ಪೂರ್ ಹೌಸ್ ಕಾಲೊನಿ ಮತ್ತು ಸದಾಶಿವನಗರದಲ್ಲಿ ವಾಸಿಸುತ್ತಿದ್ದು ಶಾದಿಮಹಲ್ ಆವರಣದಲ್ಲಿರುವ ಎಚ್‌ಎಂಎಸ್ ಕಾಂಪ್ಲೆಕ್ಸ್‌ನಲ್ಲಿ ಕಂಪನಿ ಕಚೇರಿ ತೆರೆದಿದ್ದರು. ಸಾಮಾನ್ಯ ಹೂಡಿಕೆ, ಶಿಕ್ಷಣ, ಮದುವೆ ಎಂಬ ಮೂರು ಹೆಸರಿನಲ್ಲಿ ಯೋಜನೆಗಳ ಅಡಿಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ತುಮಕೂರು, ಶಿವಮೊಗ್ಗ, ಮದುರೈ, ಕೇರಳ ಸೇರಿದಂತೆ ವಿವಿಧ ಕಡೆಯ ಸಾವಿರಾರು ಮಂದಿ ಹಣ ಹೂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಮಾನ್ಯ ಯೋಜನೆಯಡಿ ₹ 50 ಸಾವಿರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹ 3 ಸಾವಿರ ಬಡ್ಡಿ, ₹ 1 ಲಕ್ಷ ಹೂಡಿದರೆ ₹ 6 ಸಾವಿರ, ಎರಡು ಲಕ್ಷಕ್ಕೆ ₹ 12 ಸಾವಿರ, ₹ 5 ಲಕ್ಷಕ್ಕೆ ₹ 30 ಸಾವಿರ ಬಡ್ಡಿ ನೀಡುವುದಾಗಿ ಭರವಸೆ ನೀಡಿ ಗ್ರಾಹಕರ ಜತೆ ಒಡಂಬಡಿಕೆ ಮಾಡಿ
ಕೊಂಡಿದ್ದರು. 2018ರ ಜುಲೈನಲ್ಲಿ ₹ 1 ಲಕ್ಷ ಹೂಡಿಕೆ ಮಾಡಿದರೆ ಕೇವಲ ನಾಲ್ಕು ತಿಂಗಳು ಹತ್ತು ದಿನಗಳಲ್ಲಿಯೇ ₹ 10 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು. ಆಗ ಜನರು ಹೆಚ್ಚು ಹೂಡಿಕೆ ಮಾಡಿದ್ದಾರೆ’ ಎಂದರು.

ಹೂಡಿಕೆದಾರರು ಕಚೇರಿಯ ಬಳಿ ಸೇರುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ರಾತ್ರಿ 9ರವರೆಗೂ ಗ್ರಾಹಕರಿಂದ ಮಾಹಿತಿ ಸಂಗ್ರಹಿಸಿದರು.

‘ಪ್ರಕರಣ ಸಂಬಂಧ ಇಲ್ಲಿಯವರೆಗೂ ಯಾರೂ ದೂರು ದಾಖಲಿಸಿಲ್ಲ. ಶನಿವಾರ (ಜೂ.15) ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ದೂರು ಆಧರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು