ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ತುಮಕೂರು ದಸರಾ’ಗೆ ₹1 ಕೋಟಿ ವೆಚ್ಚ: ಜಿ.ಪರಮೇಶ್ವರ

Published 3 ಸೆಪ್ಟೆಂಬರ್ 2024, 2:26 IST
Last Updated 3 ಸೆಪ್ಟೆಂಬರ್ 2024, 2:26 IST
ಅಕ್ಷರ ಗಾತ್ರ

ತುಮಕೂರು: ಮೈಸೂರು ದಸರಾ ಮಾದರಿಯಲ್ಲಿ ‘ತುಮಕೂರು ದಸರಾ’ ಆಚರಣೆಗೆ ಸಿದ್ಧತೆಗಳು ನಡೆದಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಕ್ಟೋಬರ್ 11 ಹಾಗೂ 12ರಂದು 2 ದಿನಗಳ ಕಾಲ ದಸರಾ ಆಚರಿಸಲಾಗುತ್ತದೆ.

ದಸರಾ ಸಿದ್ಧತೆ ಸಂಬಂಧ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಮೂರು ದಶಕಗಳಿಂದ ವಿವಿಧ ಸಂಘ, ಸಂಸ್ಥೆಗಳು, ಪ್ರಮುಖರು ದಸರಾ ಆಚರಣೆ ಮಾಡಿಕೊಂಡು ಬಂದಿದ್ದರು. ಆದರೆ ಈ ಬಾರಿಯಿಂದ ಸರ್ಕಾರವೇ ಆಚರಣೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಗಳ ರೂಪುರೇಷೆಗಳು ಯಾವ ರೀತಿಯಲ್ಲಿ ಇರಬೇಕು ಎಂಬ ಬಗ್ಗೆ ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಯುವ ಸಮೂಹಕ್ಕೆ ಕ್ರೀಡೆ, ಮಹಿಳೆಯರಿಗಾಗಿ ಪ್ರತ್ಯೇಕ ಕಾರ್ಯಕ್ರಮ, ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ತೆಪ್ಪೋತ್ಸವ ಆಯೋಜಿಸಲು ಉದ್ದೇಶಿಸಲಾಗಿದೆ. ಹಿಂದಿನಂತೆ ಮೆರವಣಿಗೆ ಸಹ ನಡೆಯಲಿದ್ದು, ನಗರದ ವಿವಿಧ ದೇವಸ್ಥಾನಗಳ ದೇವರ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

‘ನನ್ನ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಶಾಸಕರು, ನಗರದ ಪ್ರಮುಖರು, ಹಿಂದೆ ದಸರಾ ಆಚರಣೆ ಮಾಡುತ್ತಿದ್ದ ಪ್ರಮುಖರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಾಗುವುದು. ದಸರಾ ಆಚರಿಸುವ ಎರಡು ದಿನಗಳ ಕಾಲ ನಗರದಲ್ಲಿ ದೀಪಾಲಂಕಾರ ಮಾಡಲಾಗುವುದು’ ಎಂದು ವಿವರಿಸಿದರು.

ಇದಕ್ಕೂ ಮುನ್ನ ಸಭೆ ನಡೆಸಿದ ಸಚಿವರು, ‘ಅ.11 ಹಾಗೂ 12ರಂದು 2 ದಿನಗಳ ಕಾಲ ದಸರಾ ಕಾರ್ಯಕ್ರಮ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ನಗರದ ಪ್ರಮುಖ ಬೀದಿಗಳಲ್ಲಿ ಜನಾಕರ್ಷಿಸುವಂತಹ ಮೆರವಣಿಗೆ ಏರ್ಪಡಿಸಬೇಕು. ಜಿಲ್ಲೆಯ ಸಂಸ್ಕೃತಿ ಬಿಂಬಿಸುವಂತಹ ಕಲಾ ತಂಡಗಳು ಕಲಾ ಪ್ರದರ್ಶನ ನೀಡಬೇಕು’ ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ದಸರಾ ಉತ್ಸವದ ಮುಖ್ಯ ವೇದಿಕೆಯನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುತ್ತದೆ’ ಎಂದರು.

ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಗ್ರಾಮೀಣ ದಸರಾ (ರೈತ ದಸರಾ), ಕ್ರೀಡಾ ದಸರಾ, ಸಾಂಸ್ಕೃತಿಕ, ದೀಪಾಲಂಕಾರ ಸಮಿತಿ, ಕವಿಗೋಷ್ಠಿ, ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿ, ಆಹಾರ ಮೇಳ ಸೇರಿದಂತೆ ಇತರೆ ಸಮಿತಿ ರಚಿಸಲಾಗಿದೆ. ಸೆ. 15ರಂದು ದಸರಾ ಉತ್ಸವದ ಲಾಂಛನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT