ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಸಾವಿರ ಸಸಿ ನೆಟ್ಟ ‘ವೃಕ್ಷ ಮಿತ್ರ’

ಲಕ್ಷವೃಕ್ಷ ನೆಡುವ ವೃಕ್ಷಮಿತ್ರದ ಗುರಿ ಸಾಧನೆಗೆ ಕೈ ಜೋಡಿಸಿದ ಜನ, ನಳನಳಿಸುತ್ತಿವೆ ಬೇವಿನ ಗಿಡಗಳು
Last Updated 4 ಜೂನ್ 2019, 20:02 IST
ಅಕ್ಷರ ಗಾತ್ರ

ತುಮಕೂರು: ಪರಿಸರ ಸಂರಕ್ಷಣೆಗೆ ಗಿಡಗಳನ್ನು ನೆಡುವ ಕಾರ್ಯವನ್ನು ಹತ್ತು ಹಲವು ಸಂಘಟನೆ, ಅರಣ್ಯ ಇಲಾಖೆ ಮಾಡುತ್ತಲೆ ಇರುತ್ತವೆ. ಅದರಲ್ಲೂ ಪರಿಸರ ದಿನಾಚರಣೆ ದಿನದಂದು ಉತ್ಸಾಹದಿಂದ ಗಿಡಗಳನ್ನು ನೆಡುವ ಅನೇಕ ಸಂಘ ಸಂಸ್ಥೆಗಳು ನಂತರ ಅವುಗಳತ್ತ ಕಣ್ತೆರೆದು ನೋಡದೇ ಇರುವ ಉದಾಹರಣೆಗಳು ಸಾಕಷ್ಟು.

ಆದರೆ, ಇವೆಲ್ಲಕ್ಕಿಂತ ಒಂದಿಷ್ಟು ವಿಭಿನ್ನವಾಗಿ ಪರಿಸರ ಸಂರಕ್ಷಣೆಗೆ ಗಿಡ ನೆಡುವ ಕಾರ್ಯವನ್ನು ನಗರದ ‘ವೃಕ್ಷ ಮಿತ್ರ’ ಸಂಘಟನೆ ಮಾಡುತ್ತಿದೆ. ಮೂರು ವರ್ಷಗಳ ಹಿಂದೆ ಅಂದರೆ 2016ರಲ್ಲಿ ನಗರದಲ್ಲಿ ಒಂದು ವರ್ಷದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವುದು ಹಾಗೂ ಮೂರು ವರ್ಷ ಅವುಗಳ ಸಂರಕ್ಷಣೆ ಮಾಡುವ ‘ಲಕ್ಷ ವೃಕ್ಷ’ ಯೋಜನೆ ಕೈಗೊಂಡು ನಗರದ ಹಲವು ಕಡೆಗಳಲ್ಲಿ ಗಿಡಗಳನ್ನು ನೆಟ್ಟಿದೆ.

ನಗರದ ಬಿಜಿಎಸ್ ವೃತ್ತದ ಸಮೀಪ ಇರುವ ಸಿದ್ಧಗಂಗಾ ಕಾಲೇಜು, ಮಹಾನಗರ ಪಾಲಿಕೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅರಣ್ಯ ಇಲಾಖೆ ಸಹಕಾರದಲ್ಲಿ ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳು ಈಗ ನಳನಳಿಸುತ್ತಿವೆ.

ಸಂಘಟನೆಗಳ ಪರಿಸರ ಕಾಳಜಿ ಗಮನಿಸಿ ಆರಂಭದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ಪೂರೈಸಿದ್ದರೆ, ನೆಡಲಾದ ಈ ಗಿಡಗಳ ರಕ್ಷಣೆಗೆ ಕಬ್ಬಿಣದ ತಂತಿ ಜಾಲರಿ ಹಾಕಿಸಲು ಎಸ್‌ಬಿಐ ಬ್ಯಾಂಕು ನೆರವಾಗಿತ್ತು.

ಸಿದ್ಧಗಂಗಾ ಕಾಲೇಜಿನ (ಮಹಾನಗರ ಪಾಲಿಕೆ ಹತ್ತಿರ ಇರುವ) ಸಸ್ಯವಿಜ್ಞಾನ ವಿಭಾಗದ 75ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗುಂಪು ಮೂರು ವರ್ಷಗಳ ಹಿಂದೆ ಈ ಗಿಡಗಳ ಆರೈಕೆ ಮತ್ತು ರಕ್ಷಣೆ ವಹಿಸಿಕೊಂಡಿತ್ತು.

ಬೇವಿನ ಗಿಡಕ್ಕೆ ಆದ್ಯತೆ: 2016ರಲ್ಲಿ ಸೆಪ್ಟೆಂಬರ್ 1ರಿಂದ ಗಿಡ ನೆಡುವ ಕಾರ್ಯಕ್ಕೆ ವೃಕ್ಷಮಿತ್ರ ಸಂಘಟನೆ ಚಾಲನೆ ನೀಡಿತು. ನಗರದ ಬಿಜಿಎಸ್ ವೃತ್ತದಿಂದ ಸ್ವಾತಂತ್ರ್ಯ ಚೌಕದವರೆಗೆ ಇರುವ ಅಶೋಕ ರಸ್ತೆ, ಭದ್ರಮ ವೃತ್ತದಿಂದ ಶಿವಕುಮಾರ ಸ್ವಾಮೀಜಿ ವೃತ್ತದವರೆಗೆ ಪ್ರಥಮ ಹಂತದಲ್ಲಿ ನಡೆಲಾಗಿತ್ತು. ಬಳಿಕ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪೊಲೀಸ್ ಕಚೇರಿವರೆಗೂ ಗಿಡಗಳನ್ನು ನೆಡಲಾಗಿತ್ತು. ಬಳಿಕ ಈ ಕಾರ್ಯ ವಿಸ್ತರಣೆಗೊಂಡಿತು.

ಈಗ ನಗರದ ಬಿಜಿಎಸ್ ವೃತ್ತದಿಂದ ಬಟವಾಡಿವರೆಗೆ, ಬಿಜಿಎಸ್ ವೃತ್ತದಿಂದ ಕುಣಿಗಲ್ ಸರ್ಕಲ್‌ವರೆಗೆ, ಬಿಜಿಎಸ್ ವೃತ್ತದಿಂದ ಶಿರಾ ಗೇಟ್‌ವರೆಗೆ, ಕೋತಿತೋಪು ರಸ್ತೆ, ಅಮಾನಿಕೆರೆ ಬಳಿ, ಶೆಟ್ಟಿಹಳ್ಳಿ ಮುಖ್ಯ ರಸ್ತೆ, ಹನುಮಂತಪುರ ಬಡಾವಣೆ ರಸ್ತೆಯಲ್ಲಿ ವೃಕ್ಷಮಿತ್ರ ಸಂಘಟನೆ ಗಿಡಗಳನ್ನು ನೆಟ್ಟಿದೆ.

ಬರೀ ರಸ್ತೆಗಳ ಅಕ್ಕಪಕ್ಕ, ರಸ್ತೆ ವಿಭಜದಲ್ಲಿ ಮಾತ್ರ ಗಿಡ ನೆಟ್ಟಿಲ್ಲ. ಸಾರ್ವಜನಿಕರು ಸಹಕಾರದಲ್ಲಿ ಬಡಾವಣೆಗಳಲ್ಲೂ ಗಿಡಗಳನ್ನು ನೆಡಲಾಗಿದೆ. ಸಂಘಟನೆಯ ಕಾರ್ಯಕ್ಕೆ ಜನರೂ ಕೈಜೋಡಿಸಿದ್ದಾರೆ.

ಕೈ ಜೋಡಿಸಿದ ಜನ: ‘ಈ ಗಿಡ ನೆಡುವ ಕಾರ್ಯ ಆರಂಭಿಸಿದ ಒಂದು ವರ್ಷ ನಮ್ಮದೇ ಕೊಳವೆ ಬಾವಿಯಿಂದ ನೀರನ್ನು ಟ್ಯಾಂಕರ್ ಬಾಡಿಗೆ ಪಡೆದು ಗಿಡಗಳಿಗೆ ನೀರು ಹಾಕಲಾಯಿತು. ನೀರು ಕಡಿಮೆಯಾದ ಬಳಿಕ ಮಹಾನಗರ ಪಾಲಿಕೆಗೆ ಮನವಿ ಮಾಡಿದಾಗ ಅಧಿಕಾರಿಗಳು ಸ್ಪಂದಿಸಿದರು. ಹಿಂದಿನ ಆಯುಕ್ತ ಮಂಜುನಾಥಸ್ವಾಮಿ, ಈಗಿನ ಆಯುಕ್ತ ಟಿ.ಭೂಬಾಲನ್ ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮದೇ ನರ್ಸರಿ ಮಾಡಿಕೊಂಡು ಗಿಡಗಳನ್ನು ಬೆಳೆಸಿ ನೆಡುತ್ತಿದ್ದೇವೆ’ ಎಂದು ವೃಕ್ಷಮಿತ್ರ ಸಂಯೋಜಕ ಸಿದ್ದಪ್ಪ ವಿವರಣೆ ನೀಡಿದರು.

ರಸ್ತೆ ವಿಭಜಕದಲ್ಲಿ ಬೇವಿನ ಗಿಡ ನೆಟ್ಟಿರುವುದರಿಂದ ಯಾವುದೇ ತೊಂದರೆ ಇಲ್ಲ. ಈ ಗಿಡ ಪರಿಸರ ಸಂರಕ್ಷಣೆಗೆ ಪೂರಕ, ಜನಾರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಗಿಡದ ಬೇರುಗಳು ನೇರ ಆಳಕ್ಕಿಳಿಯುತ್ತವೆ. ಅಡ್ಡಾದಿಡ್ಡಿ ಹರಡಿ ರಸ್ತೆಗೆ, ವಿಭಜಕಕ್ಕೆ ತೊಂದರೆ ಕೊಡುವುದಿಲ್ಲ. ಅದೆಲ್ಲವನ್ನೂ ವೈಜ್ಞಾನಿಕ ರೀತಿ ಗಮನಿಸಿಯೇ ಗಿಡಗಳನ್ನು ನೆಟ್ಟಿದ್ದೇವೆ ಎಂದು ಬೇವಿನ ಗಿಡ ನೆಟ್ಟಿರುವ ಹಿಂದಿನ ಉದ್ದೇಶ ವಿವರಿಸಿದರು.

ಎಂತಹ ಬಿಸಿ ತಾಪಮಾನ ಇದ್ದರೂ, ಏನೇ ಅಡಚಣೆಯಾದರೂ ಅವುಗಳ ರಕ್ಷಣೆಗೆ ವಿಶೇಷ ಗಮನಹರಿಸಿಕೊಂಡು ಬರಲಾಗಿದೆ. ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. 2016ರಲ್ಲಿ ಪ್ರಥಮ ಹಂತವಾಗಿ 250, ನಂತರ 500 ಗಿಡಗಳನ್ನು ನೆಡಲಾಯಿತು. ಈಗ ನಗರದಲ್ಲಿ ಒಟ್ಟು 11 ಸಾವಿರ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT