ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಶತಮಾನದ ಸಂತೆಗೆ ಸೌಕರ್ಯದ್ದೇ ಚಿಂತೆ!

Last Updated 15 ನವೆಂಬರ್ 2021, 6:56 IST
ಅಕ್ಷರ ಗಾತ್ರ

ತುರುವೇಕೆರೆ: ತುಮಕೂರು ಜಿಲ್ಲೆಯ ಪ್ರಮುಖ ಸಂತೆಗಳಲ್ಲಿ ಒಂದೆನಿಸಿರುವ ತುರುವೇಕೆರೆ ಸಂತೆಯುಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸೊರಗಿದೆ.

ಪ್ರತಿ ಸೋಮವಾರ ನಡೆಯುವ ಸಂತೆಗೆ ರೈತರು, ಗ್ರಾಹಕರು ಮತ್ತು ವ್ಯಾಪಾರಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರುವುದರಿಂದ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಈ ಸಂತೆಯು 13ನೇ ಶತಮಾನದ ಹೊಯ್ಸಳರ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಸ್ಥಳೀಯ ರೈತರು, ವ್ಯಾಪಾರಿಗಳು ಎತ್ತಿನಗಾಡಿ ಮತ್ತು ಪ್ರಾಣಿಗಳ ಹೆಗಲ ಮೇಲೆ ವಸ್ತುಗಳನ್ನು ಹಾಕಿಕೊಂಡು ಸಂತೆಗೆ ತರುತ್ತಿದ್ದರು.

ಆಗ ಹಣಕ್ಕೆ ಬದಲಾಗಿ ವಸ್ತುಗಳ ವಿನಿಮಯ ಮಾಡಿಕೊಳ್ಳುವ ಸಾಟಿ ವ್ಯಾಪಾರ ಚಾಲ್ತಿಯಲ್ಲಿತ್ತು. ತುರುವೇಕೆರೆ ಕೆರೆಯ ದಡದಲ್ಲಿ ನೀರು, ನೆರಳು ಸಿಗುವ ಕಾರಣಕ್ಕೆ ಆ ಕಾಲದಲ್ಲಿ ಇಲ್ಲೇ ಸಂತೆ ಜರುಗುತ್ತಿತ್ತು. ಇತ್ತೀಚೆಗೆ ಸಂತೆಗೆ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಎಲ್ಲಿ ನೋಡಿದರೂ ನೂಕುನುಗ್ಗಲು ಮತ್ತು ವಾಹನ ದಟ್ಟಣೆ ಇದ್ದು ಹತ್ತಾರು ಸಮಸ್ಯೆಗಳು ಧುತ್ತೆಂದು ತೆರೆದುಕೊಂಡಿವೆ.

ಇಲ್ಲಿನ ಬಾಣಸಂದ್ರ ರಸ್ತೆಯ ಅಂಚೆ ಕಚೇರಿ ವೃತ್ತದಿಂದ ಆರಂಭಗೊಂಡು ಸಂತೆಯು ಕೆರೆ ಕೋಡಿಯವರೆಗಿನ ರಸ್ತೆಯ ಇಕ್ಕೆಲಗಳಲ್ಲಿ, ಉಡಸಲಮ್ಮ ದೇವಾಲಯದ ಮುಂಭಾಗ, ವಿವೇಕಾನಂದ ಕಾಲೇಜು ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯದ ರಸ್ತೆ, ಪಶು ಆಸ್ಪತ್ರೆಯ ಕಾಂಪೌಂಡ್‍ ತನಕವೂ ಸಂತೆ ಆವರಿಸಿಕೊಂಡಿದೆ.

ಏನೇನು ಸಿಗುತ್ತೆ: ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಸಂತೆಯು ಸಂಜೆ 8 ಗಂಟೆವರೆಗೂ ನಡೆಯುತ್ತದೆ. ಬಾಳೆಕಾಯಿ, ಬಾಳೆಹಣ್ಣು, ನೊಗ, ಕಾಯಿ ತುರಿಯುವ ಮಣೆ, ಚಾಟಿ, ಶ್ಯಾವಿಗೆ ಕೊಂತು ಸೇರಿದಂತೆ ಮರದಿಂದ ಮಾಡಿದ ವಸ್ತುಗಳು, ಊಟದೆಲೆ, ಕಬ್ಬಿಣದಿಂದ ಮಾಡಿದ ಕುಡಲಿ, ಕೊಡ್ಲಿ ಸಿಗುತ್ತದೆ.

ಈರುಳ್ಳಿ-ಬೆಳುಳ್ಳಿ, ತರಕಾರಿಗಳು, ಮದುವೆ ಶಾಸ್ತ್ರದ ವಸ್ತುಗಳು, ಹಣ್ಣುಗಳು, ಕರಿಮೀನು, ಕೃಷಿ ಪರಿಕರಗಳು, ರಾಗಿ, ಇತರೆ ಧಾನ್ಯಗಳು, ಗೃಹಬಳಕೆಯ ಉಪಕರಣಗಳು, ಬೆಣ್ಣೆ, ಗೆಣಸು, ಎಲೆ ಪೆಂಡಿ, ಹಲವು ತರದ ಸೊಪ್ಪು, ನಾಟಿ ಕೋಳಿ, ದಿನಸಿ ವಸ್ತುಗಳು, ಪಾತ್ರೆ, ಅಡಿಕೆ, ತಿಂಡಿ, ತಿನಿಸುಗಳು ಹಾಗೂ ಇನ್ನೂ ಅನೇಕ ರೀತಿಯ ವಸ್ತುಗಳಿಂದ ಹಿಡಿದು ಎಲ್ಲ ವಸ್ತುಗಳು ಇಲ್ಲಿ ಸಿಗಲಿವೆ.

ಸಂತೆಗೆ ಸ್ಥಳೀಯವಾಗಿ ಬೆಳೆದ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರಲು ಹೊರ ತಾಲ್ಲೂಕುಗಳಿಂದಲೂ ಬರುತ್ತಾರೆ. ಮಾಯಸಂದ್ರ, ತಿಪಟೂರು, ಕೆ.ಬಿ. ಕ್ರಾಸ್‍, ಚಿಕ್ಕನಾಯಕನಹಳ್ಳಿ, ಕಲ್ಲೂರು ಕ್ರಾಸ್, ತುಮಕೂರು, ಗುಬ್ಬಿ ಭಾಗದಿಂದಲೂ ನೂರಾರು ಸಂಖ್ಯೆಯ ವ್ಯಾಪಾರಿಗಳು ಬರುತ್ತಾರೆ.

ಸರಕು ಮತ್ತು ಸಾಮಾನುಗಳನ್ನು ಸುಲಭವಾಗಿ ಸಾಗಣೆ ಮಾಡಲು ಇಲ್ಲಿನ ಸಂತೆ ಕೇಂದ್ರಸ್ಥಾನವಾಗಿದೆ. ಹಾಗಾಗಿ, ಪ್ರತಿ ಸಂತೆಯಲ್ಲಿ ಸುಮಾರು ಒಂದು ಸಾವಿರ ಜನ ಸೇರಿದರೆ, ಹಬ್ಬದ ಸಂತೆಗಳಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಲಿದ್ದು, ಕಾಲಿಡಕ್ಕೂ ಜಾಗವಿಲ್ಲದಷ್ಟು ಕಿಕ್ಕಿರಿಯುತ್ತದೆ.

ಬಾಣಸಂದ್ರ ವೃತ್ತದಿಂದ ತುರುವೇಕೆರೆ ಕೆರೆ ಕೋಡಿ ತನಕ, ಶ್ರೀರಂಗಪಟ್ಟಣ-ಬೀದರ್ 150ಎ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಮೂಲಕ ಹಾಯ್ದು ಹೋಗಿದೆ. ಇದರ ಎಡ, ಬಲ ರಸ್ತೆಯಲ್ಲಿ ನೂರಾರು ವ್ಯಾಪಾರಿಗಳು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಕೊಳ್ಳುವ ಗ್ರಾಹಕರು ಕೂಡ ರಸ್ತೆಯಲ್ಲೇ ನಿಂತುಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತದೆ. ಅಲ್ಲದೆ ಈ ಹೆದ್ದಾರಿಯಲ್ಲಿ ಬಾರಿ ಗಾತ್ರದ ವಾಹನಗಳು ಎಡಬಿಡದೆ ಚಲಿಸುತ್ತವೆ. ಒಂದು ವೇಳೆ ಆಯತಪ್ಪಿ ರಸ್ತೆಬದಿಗೆ ಸರಿದರೆ ಸಾಕಷ್ಟು ಅಪಘಾತಕ್ಕೆ ಎಡೆಮಾಡಿಕೊಡುತ್ತದೆ.

ಗ್ರಾಹಕರು ವಾಹನ ನಿಲುಗಡೆಗೆ ಸ್ಥಳವಿಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸುತ್ತಾರೆ. ಇದರಿಂದ ಇನ್ನಿತರ ವಾಹನಗಳಿಗೆ ತೊಂದರೆಯಾಗಿ ಟ್ರಾಫಿಕ್‍ ಜಾಮ್‍ ಆಗುತ್ತದೆ. ಹಾಗಾಗಿ, ಪ್ರತಿ ಸಂತೆಯಂದು ಒಬ್ಬ ಪೊಲೀಸ್‍ ಕಾನ್‌ಸ್ಟೆಬಲ್‌ ನೇಮಿಸಿದರೆ ಕಳ್ಳರ ಕಾಟ ಮತ್ತು ಟ್ರಾಫಿಕ್‍ ಸಮಸ್ಯೆಗೆ ಕಡಿವಾಣ ಹಾಕಬಹುದು ಎನ್ನುವುದು ಗ್ರಾಹಕರ ಮನವಿ.

ಏನು ಬೇಕು: ಮಳೆಗಾಲದಲ್ಲಿ ಮತ್ತು ಬಿಸಿಲಿನಲ್ಲಿ ಸಂತೆಯ ವಸ್ತುಗಳು ನೆನೆದು ಓಣಗದಂತೆ ನೆರಳಿನ ವ್ಯವಸ್ಥೆ ಮಾಡಬೇಕು. ಪ್ರತಿ ವ್ಯಾಪಾರಿಗಳು ವ್ಯಾಪಾರ ಮಾಡಲು ಜಗಲಿ ನಿರ್ಮಿಸಬೇಕು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ಮತ್ತು ಕ್ಯಾಂಟೀನ್‍ ಸೌಲಭ್ಯ ಕಲ್ಪಿಸಬೇಕು. ಸಂಜೆ ಸಂತೆ ಮೈದಾನದಲ್ಲಿ ವಿದ್ಯುತ್‍ ಇರುವುದಿಲ್ಲ. ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ದೂರದ ಊರುಗಳ ವ್ಯಾಪಾರಿಗಳಿಗೆ ಸಂತೆ ಮುಗಿದ ಮೇಲೆ ಉಳಿಯುವ ವಸ್ತುಗಳನ್ನು ಇಡಲು ದಾಸ್ತಾನ ಮಳಿಗೆ ಬೇಕು. ವಾಹನಗಳ ನಿಲ್ಲಿಸಲು ಪಾರ್ಕಿಂಗ್‍ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಹಕರು ಮತ್ತು ವ್ಯಾಪಾರಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT