ಶನಿವಾರ, ಜನವರಿ 29, 2022
17 °C
ಸೋಂಕಿತರೆಲ್ಲ ಕೇರಳದಿಂದ ಬಂದವರು

ತುಮಕೂರು: ಕೇರಳದಿಂದ ಬಂದ 15 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೇರಳದಿಂದ ಬಂದಿರುವ 15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಮಂಗಳವಾರ ಕೊರೊನಾ ಸೋಂಕು ಪತ್ತೆಯಾಗಿದ್ದು ಎಲ್ಲರನ್ನೂ ಐಸೋಲೇಟ್‌ ಮಾಡಲಾಗಿದೆ. 

ಸಿದ್ಧಗಂಗಾ ಮಠದಲ್ಲಿರುವ ಸಿದ್ಧಗಂಗಾ ನರ್ಸಿಂಗ್ ಕಾಲೇಜಿನಲ್ಲಿ ಎಂಟು ಹಾಗೂ ವರದರಾಜು ಕಾಲೇಜಿನಲ್ಲಿ ಏಳು ವಿದ್ಯಾರ್ಥಿಗಳಿಗೆ ಸೊಂಕು ತಗುಲಿರುವುದು ದೃಢಪಟ್ಟಿದ್ದು, ಎಲ್ಲರೂ ಕೇರಳದಿಂದ ಬಂದವರು.

ನಗರ ಹಾಗೂ ನಗರಕ್ಕೆ ಹೊಂದಿಕೊಂಡಂತೆ ಇರುವ ಅಕ್ಷಯ ನರ್ಸಿಂಗ್ ಕಾಲೇಜು, ಅಶ್ವಿನಿ ಆಯುರ್ವೇದ ಕಾಲೇಜು, ಅರುಣ ನರ್ಸಿಂಗ್ ಕಾಲೇಜು, ಶ್ರೀದೇವಿ, ಶ್ರೀಕೃಷ್ಣ ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿರುವ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಸಿದ್ಧಗಂಗಾ, ವರದರಾಜು ಕಾಲೇಜಿನಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ.

‘ವಿವಿಧ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಕೇರಳದಿಂದ ಬಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, 15 ಮಂದಿಗೆ ದೃಢಪಟ್ಟಿದೆ. ಅಂತಹವರನ್ನು ಐಸೋಲೇಟ್ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು, ಅಂತಹ ತರಗತಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ವಿಧ್ಯಾರ್ಥಿಗಳು ತಂಗಿರುವ ಸಿದ್ಧಗಂಗಾ ನರ್ಸಿಂಗ್ ಕಾಲೇಜು ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಸೋಂಕು ದೃಢಪಟ್ಟ ಕಾಲೇಜನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಬೇಕು. ನರ್ಸಿಂಗ್ ಪರೀಕ್ಷೆ ನಡೆಯುತ್ತಿರುವುದರಿಂದ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.

ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೆ ಬಂದ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ಮತ್ತು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಶೇಷವಾಗಿ ನರ್ಸಿಂಗ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ದಾರೆ.  

ನಗರದ ನರ್ಸಿಂಗ್ ಕಾಲೇಜುಗಳಲ್ಲಿ ಬಹುತೇಕ ಕೇರಳದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸ್ಥಳೀಯರ ಸಂಖ್ಯೆ ತೀರ ಕಡಿಮೆ. ಹೆಚ್ಚಿನವರು ಹೊರಗಿನಿಂದಲೇ ಬಂದವರು. ಇತ್ತೀಚೆಗೆ ನರ್ಸಿಂಗ್ ಕಾಲೇಜುಗಳು ಆರಂಭವಾಗಿದ್ದು, ಕೇರಳದಿಂದ ಬಂದವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ.

‘ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದಿಂದ ಹೊಸದಾಗಿ ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟ ಕಾಲೇಜಿನ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಿ, 14 ದಿನಗಳ ಕಾಲ ಸರ್ವೇಕ್ಷಣಾ ಚಟುವಟಿಕೆ ಕೈಗೊಳ್ಳಲಾಗುವುದು’ ಎಂದು ಸರ್ವೇಕ್ಷಣಾ ಅಧಿಕಾರಿ ಡಾ.ಮೋಹನ್‍ದಾಸ್ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಆರೋಗ್ಯಾಧಿಕಾರಿ ಡಾ.ರಕ್ಷಿತ್ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು