ತುಮಕೂರು: ಸಣ್ಣ–ಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 21 ಜೋಡಿಗಳು ಮತ್ತೆ ಒಂದಾಗಿವೆ.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಬಂದಿದ್ದವರಿಗೆ ನ್ಯಾಯಾಧೀಶರು ತಿಳಿ ಹೇಳಿದರು. ಶಿರಾ, ತಿಪಟೂರು, ಪಾವಗಡ, ಗುಬ್ಬಿ ತಾಲ್ಲೂಕಿನ 21 ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾದವು. ಒಟ್ಟಾಗಿ ಬಾಳಲು ನಿರ್ಧರಿಸಿದವು.
‘ಮಕ್ಕಳು, ಪೋಷಕರಿಗಾಗಿ ಪರಸ್ಪರ ನಂಬಿಕೆಯಿಂದ ಜೀವನ ನಡೆಸಬೇಕು. ತಂದೆ-ತಾಯಿ ಕಷ್ಟ ಪಟ್ಟು ದುಡಿದು ನಿಮಗೆ ವಿದ್ಯಾಭ್ಯಾಸ ಕೊಡಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಈಗ ವಿಚ್ಛೇದನ ಪಡೆಯುವುದು ಸರಿಯಲ್ಲ’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಯಂತ್‌ಕುಮಾರ್ ದಂಪತಿಗಳಿಗೆ ಬುದ್ಧಿ ಹೇಳಿದರು.
ನಗರದಲ್ಲಿ ಲೋಕ್ ಅದಾಲತ್ ನಂತರ ಮಾತನಾಡಿ, ಚಿಕ್ಕ ವಿಚಾರವನ್ನೇ ದೊಡ್ಡದಾಗಿಸಿ ವಿಚ್ಛೇದನ, ಜೀವನಾಂಶಕ್ಕೆ ಕೋರ್ಟ್‌ಗೆ ಬರುವುದು ದುರಂತವೇ ಸರಿ. ಹಿರಿಯರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಬೇಕು ಎಂದು ಸಲಹೆ ಮಾಡಿದರು.
7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ, ಪ್ರಧಾನ ಕೌಟುಂಬಿಕ ನ್ಯಾಯಾಧೀಶ ಮುನಿರಾಜ, 1ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಧೀಶ ಜಯಪ್ರಕಾಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಇತರರು ಉಪಸ್ಥಿತರಿದ್ದರು.