ಗುರುವಾರ , ನವೆಂಬರ್ 21, 2019
20 °C
ಬಿಜೆಪಿ ತುಮಕೂರು ಘಟಕ ಆಯೋಜಿಸಿದ್ಧ ರಾಷ್ಟ್ರೀಯ ಏಕತಾ ಅಭಿಯಾನ

ಅಧಿಕಾರಕ್ಕಾಗಿ ಅಲ್ಲ, ದೇಶಕ್ಕಾಗಿ 370 ರದ್ದು: ಬೈಜಯಂತ್ ಪಾಂಡ

Published:
Updated:
Prajavani

ತುಮಕೂರು: ಜಮ್ಮು ಮತ್ತು ಕಾಶ್ಮೀರಕ್ಕೆ 370 ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ರದ್ದುಪಡಿಸಿರುವುದು ದೇಶದ ಒಳಿತಿಗಾಗಿಯೇ ಹೊರತು ಬಿಜೆಪಿ ಪಕ್ಷದ ಹಿತಾಸಕ್ತಿಗೆ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ವಕ್ತಾರ ಬೈಜಯಂತ್ ಪಾಂಡ ಹೇಳಿದರು.

ಸೋಮವಾರ ಬಿಜೆಪಿ ತುಮಕೂರು ಘಟಕವು ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ಒಂದು ದೇಶ ಒಂದು ಸಂವಿಧಾನ ಎಂಬ ವಿಷಯ ಕುರಿತು ಮಾತನಾಡಿದರು.

370 ವಿಧಿಯಡಿ ಭಾರತದ ಬೇರೆ ಯಾವುದೇ ರಾಜ್ಯಗಳಿಗೆ ಸಿಗದಿರುವಂಥ ಅಧಿಕಾರಗಳನ್ನು ವಿಶೇಷ ಸ್ಥಾನಮಾನದಡಿ ಜಮ್ಮು ಕಾಶ್ಮೀರಕ್ಕೆ ಕೊಡಲಾಯಿತು. ಆದರೆ ಒಳಿತಿಗಿಂತ ಕೆಡುಕಿಗೇ ಹೆಚ್ಚು ಬಳಕೆ ಮಾಡಿಕೊಂಡು ಬರಲಾಯಿತು. ಉದಾಹರಣೆಗೆ ದೇಶದ ಉಳಿದ ರಾಜ್ಯಗಳ ಪ್ರತಿ ನಾಗರಿಕನಿಗೆ ₹ 100 ನೀಡಿದರೆ ಜಮ್ಮು ಕಾಶ್ಮೀರದ ನಾಗರಿಕರಿಗೆ ₹ 400 ದೊರಕಿಸಿದೆ. ಆದರೆ, 70 ವರ್ಷವಾದರೂ ಅಲ್ಲಿನ ಜನ ಜೀವನ ಮಟ್ಟ ಸುಧಾರಿಸಿಲ್ಲ ಎಂದು ಹೇಳಿದರು.

‘ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಉದ್ಯೋಗ ಸೃಷ್ಟಿಯಾಗಿಲ್ಲ. ಭಯೋತ್ಪಾದಕರ ದೃಷ್ಕೃತ್ಯಕ್ಕೆ ಹೆಚ್ಚು 370 ಬಳಕೆಯಾಗಿದೆ’ ಎಂದು ಹೇಳಿದರು.

ಜಮ್ಮು ಕಾಶ್ಮೀರ ಎಂದು ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿತೊ ಅಂದೇ ಭಾರತದ ಭಾಗವಾಯಿತು. ಆದರೆ, ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಳಂಬವಾಯಿತು. ಪಾಕಿಸ್ತಾನವು ತನ್ನ ದುಷ್ಕೃತ್ಯಕ್ಕೆ, ಭಯೋತ್ಪಾದಕರು ಅಟ್ಟಹಾಸಕ್ಕೆ 370 ಬಳಸಿಕೊಂಡರು. ಈಗ ಅದನ್ನು ರದ್ದುಪಡಿಸಿ ತಕ್ಕ ಪಾಠ ಕಲಿಸಲಾಗಿದೆ ಎಂದು ಹೇಳಿದರು.

ಮಹಾನ್ ನಾಯಕರೂ ವಿರೋಧಿಸಿದ್ದರು

‘ಡಾ.ಬಿ.ಆರ್.ಅಂಬೇಡ್ಕರ್, ರಾಮ್ ಮನೋಹರ ಲೋಹಿಯಾ ಅವರಂಥ ಮಹಾನ್ ನಾಯಕರೂ ಜಮ್ಮು ಕಾಶ್ಮೀರಕ್ಕೆ 370 ಜಾರಿ ಮಾಡುವುದನ್ನು ವಿರೋಧಿಸಿದ್ದರು. ಭಾರತೀಯ ಜನಸಂಘವು ವಿರೋಧಿಸಿತ್ತು. ಅಷ್ಟೇ ಅಲ್ಲ 370 ಜಾರಿ ಮಾಡುವುದಕ್ಕೆ ಬಹು ಉತ್ಸುಕತೆ ಹೊಂದಿದ್ದ ಜವಾಹರ ಲಾಲ್ ನೆಹರೂ ಅವರೂ ಇದು ತಾತ್ಕಾಲಿಕ ಮಾತ್ರ ಎಂದು ಅಂದಿನ ಸಂಸತ್‌ನಲ್ಲಿ ಹೇಳಿದ್ದರು. ಆದರೆ, ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದರು’ ಎಂದು ಬೈಜಯಂತ್ ಹೇಳಿದರು.

ಬಿಜೆಪಿ ರಾಜ್ಯ ಆರ್ಥಿಕ ವಿಭಾಗದ ರಾಜ್ಯ ಸಂಚಾಲಕ ವಿಶ್ವನಾಥ್ ಭಟ್ ಮಾತನಾಡಿ, ‘ಜಾತ್ಯತೀತ ರಾಜಕಾರಣ ಹೆಸರಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 370 ವಿಧಿ ಪ್ರಕಾರ ವಿಶೇಷ ಸ್ಥಾನಮಾನ ನೀಡಿ ಕಾಂಗ್ರೆಸ್ ದೇಶಕ್ಕೆ ದ್ರೋಹ ಮಾಡಿದೆ. ಈ ವಿಷಯದಲ್ಲಿ ನೆಹರೂ ಅವರು ದೇಶಕ್ಕೆ ಮಾಡಿದ ದ್ರೋಹ ಬೇರೆ ಯಾರೂ ಮಾಡಿಲ್ಲ. ಅದನ್ನು ಈಗ ಸರಿಪಡಿಸಲಾಗಿದೆ ಎಂದು ಹೇಳಿದರು.

’370 ವಿಧಿ, 35–ಎ ವಿಧಿ ರದ್ದುಪಡಿಸುವುದಕ್ಕಾಗಿಯೇ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಮುಖ್ಯವಾಗಿತ್ತೇ ಹೊರತು ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಅಲ್ಲ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕರಾದ ಸೊಗಡು ಶಿವಣ್ಣ, ಬಿ.ಸುರೇಶ್‌ಗೌಡ ವೇದಿಕೆಯಲ್ಲಿದ್ದರು.

 

ಪ್ರತಿಕ್ರಿಯಿಸಿ (+)