ಮಂಗಳವಾರ, ಜನವರಿ 26, 2021
16 °C
ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

ಚಿ.ನಾ.ಹಳ್ಳಿಗೆ 4 ಟಿಎಂಸಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಭದ್ರಾಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ಯೋಜನೆ ಸೇರಿದಂತೆ ಎಲ್ಲ ಮೂಲಗಳಿಂದ ತಾಲ್ಲೂಕಿನ ಕೆರೆಗಳಿಗೆ 4 ಟಿಎಂಸಿ ಅಡಿ ನೀರು ಹರಿಸಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತಾಲ್ಲೂಕಿನ ಶೆಟ್ಟಿಕೆರೆ ಪ್ರಾಥಮಿಕ ಶಾಲಾ ಆವರಣದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಸಾಸಲು ಕೆರೆಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಅಟಲ್ ಭೂ ಜಲ್ ಯೋಜನೆಯಲ್ಲಿ ರಾಜ್ಯಕ್ಕೆ ₹1,208 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಲ್ಲಿ ಕೆಲವು ತಾಲ್ಲೂಕುಗಳನ್ನು ಆಯ್ಕೆ ಮಾಡಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಸೇರ್ಪಡಿಸಲಾಗಿದೆ ಎಂದರು. 

ಸಣ್ಣ ನೀರಾವರಿ ಇಲಾಖೆಯ ಖಾತೆ ನನ್ನ ಕೈಯಲ್ಲಿದೆ, ಇಡೀ ತಾಲ್ಲೂಕಿನ ಕೆರೆಗಳ ಸಮಗ್ರ ಚಿತ್ರಣವೂ ನನ್ನ ಬಳಿ ಇದೆ ಹಾಗಾಗಿ ಇನ್ನು 2 ವರ್ಷಗಳಲ್ಲಿ ತಾಲ್ಲೂಕಿನ ಪ್ರತಿ ಕೆರೆಗಳೂ ತುಂಬುವುದು, ಹಳ್ಳಕೊಳ್ಳಗಳಲ್ಲಿ ನೀರು ನಿಲ್ಲುವಂತೆ ಮಾಡುವುದು ನನ್ನ ಗುರಿಯಾಗಿದೆ. ₹250 ಕೋಟಿ ಟೆಂಡರ್ ಕರೆದು ನೀರಾವರಿ ಯೋಜನೆಗೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ನಾನು 3-6 ತಿಂಗಳಿಗೊಮ್ಮೆ ವಿವಾದಕ್ಕೆ ಬರುತ್ತೇನೆ, ಕಾರಣ ಅಭಿವೃದ್ಧಿ ಕೆಲಸಗಳಾಗಲಿ ಎಂದು. ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗೆ ಹಲವು ಬಾರಿ ಕೆಲಸ ಪೂರ್ಣಗೊಂಡಿರದ ಬಗ್ಗೆ ತಿಳಿಸಿದ್ದೆ. ಆದರೂ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಇಲಾಖೆಗೆ ಬಂದ ಅನುದಾನದ ಹಣ ವಾಪಾಸ್ ಹಿಂತಿರುಗುತ್ತದೆ, ಜನರಿಗೆ ಸಹಾಯವಾಗುವುದಿಲ್ಲ ಎಂಬ ಬೇಸರದಿಂದ ಆ ಪದ ಬಳಕೆಯಾಯಿತು ಎಂದು ಸ್ಪಷ್ಟಪಡಿಸಿದರು.

ಎಪಿಎಂಸಿ ಮಾಜಿ ಸದಸ್ಯ ಶಿವರಾಜ್ ಮಾತನಾಡಿ, ‘ಈ ಮೊದಲು ಜಮೀನು ಬಿಟ್ಟುಕೊಡದ ಸಮಯದಲ್ಲಿ ಮಾಧುಸ್ವಾಮಿಯವರ ಬಗ್ಗೆ ವಿರೋಧ ಪಕ್ಷದವರು ಹಲವು ರೀತಿ ಮಾತನಾಡುತ್ತಿದ್ದರು. ಆದರೆ ಸಚಿವರು ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರದ ಕೊಡಿಸಿದ್ದರಿಂದ ಸಾಕಷ್ಟು ರೈತರಿಗೆ ಅನುಕೂಲವಾಯಿತು ಇದರಿಂದ ಬಿಳಿಗೆರೆಯಿಂದ ಸಾಸಲು ಕೆರೆ ನಂತರ ಹಳ್ಳಿ ಭಾಗಗಳಿಗೂ ನೀರು ಹರಿಯಿತು’ ಎಂದರು.

ಜಿ.ಪಂ.ಸದಸ್ಯೆ ಮಂಜುಳ, ತಾ.ಪಂ.ಸದಸ್ಯೆ ಶೈಲಾ ಶಶಿಧರ್, ತಾ.ಪಂ.ಸದಸ್ಯ ಕೇಶವಮೂರ್ತಿ, ಮಾಜಿ ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಮಾತನಾಡಿದರು.

ಮಾಜಿ ಜಿ.ಪಂ.ಸದಸ್ಯೆ ಲೋಹಿತಬಾಯಿ, ವಕೀಲ ಎನ್.ಎನ್.ಶ್ರೀಧರ್, ತುಮಕೂರು ಹಾಲು ಉತ್ಪಾದಕ ಮಂಡಲದ ಸದಸ್ಯ ಹಳೆಮನೆ ಶಿವನಂಜಪ್ಪ, ತಾ.ಪಂ.ಸದಸ್ಯೆ ಇಂದಿರಮ್ಮ , ರಾಜಶೇಖರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.