ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

Last Updated 18 ಡಿಸೆಂಬರ್ 2018, 13:59 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸಡಗರ ಸಂಭ್ರಮದಿಂದ ಮಂಗಳವಾರ ವೈಕುಂಠ ಏಕಾದಶಿ ನಡೆಯಿತು. ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಸೌಮ್ಯ ಕೇಶವಸ್ವಾಮಿ ದೇಗುಲಕ್ಕೆ ಭಕ್ತ ಸಾಗರವೇ ಹರಿದುಬಂತು.‌

ದೇವಸ್ಥಾನವನ್ನು ವಿಧದ ಹೂಗಳಿಂದ ಅಲಂಕರಿಸಲಾಗಿತ್ತು. ಒಳಭಾಗದಲ್ಲಿ ಗರುಡ, ಸುಬ್ರಹ್ಮಣ್ಯ, ಸುಗ್ರೀವಸ್ವಾಮಿ ಮೂರ್ತಿಗಳನ್ನು ಅಲಂಕರಿಸಿ ಜೋಡಿಸಲಾಗಿತ್ತು. ಭಕ್ತರು ಸಾಲಿನಲ್ಲಿ ಬಂದು ವೈಕುಂಠ ದ್ವಾರ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗಿತ್ತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಇತಿಹಾಸ ಪ್ರಸಿದ್ಧ ಯೋಗಾನರಸಿಂಹ ಸ್ವಾಮಿ ದೇಗುಲದಲ್ಲಿ ವಿಶೇಷವಾಗಿ ವೈಕುಂಠ ಏಕಾದಶಿ ಆಚರಿಸಲಾಯಿತು. ವಿದ್ಯುತ್ ದೀಪಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಗಳಾದ ಕೃಷ್ಣ, ಗರುಡ ಮತ್ತು ಕುದುರೆ ಮೇಲೆ ಕುಳಿತ ಭಂಗಿಯಲ್ಲಿರುವ ಸರ್ಪದ ವಿಗ್ರಹಗಳನ್ನು ಅಲಂಕರಿಸಲಾಗಿತ್ತು.

ಅಲಂಕಾರಿಕ ದ್ವಾರಗಳು ಮತ್ತು ವೇಷಭೂಷಣಗಳು ಭಕ್ತರನ್ನು ಆಕರ್ಷಿಸಿತು. ಯೋಗಾನರಸಿಂಹ ಸ್ವಾಮಿಗೆ ಮುತ್ತುರತ್ನಗಳಿಂದ ಅಲಂಕರಿಸಲಾಗಿತ್ತು. ಭಕ್ತರು ದೇವಸ್ಥಾನವನ್ನು ಸುತ್ತು ಹಾಕಿ ದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಲಾತ್ತು. ಎಲ್ಲ ಭಕ್ತರಿಗೆ ಪ್ರಸಾದ ನೀಡಲಾಯಿತು.

ಕೊಳದ ಬಳಿಯಿರು ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನ, ಕನ್ನಿಕಾಪರಮೇಶ್ವರಿ ಮತ್ತು ಉಪ್ಪಾರಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ವಿಶೇಷವಾಗಿ ವೈಕುಂಠ ಏಕಾದಶಿ ಆಚರಿಸಲಾಯಿತು.

ಕೋಟೆಬೆಟ್ಟದಲ್ಲಿರುವ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆದವು. ಚಿಕ್ಕ ಬೆಟ್ಟದಲ್ಲಿರುವ ದೇವಸ್ಥಾನವನ್ನು ಭಕ್ತರು ಗೋವಿಂದ ಗೋವಿಂದ ಪಠಣದೊಂದಿಗೆ ಮೆಟ್ಟಿಲು ಹತ್ತುತ್ತಾ ಸಾಗಿದರು. ವಿವಿಧೆಡೆಯಿಂದ ಬಂದು ದೇವರ ದರ್ಶನ ಪಡೆದು ಪುಳಕಿತರಾದರು.

ನಂಜಾವಧೂತ ಸ್ವಾಮೀಜಿ ಭೇಟಿ: ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ (ಸ್ಪಟೀಕಪುರಿ) ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಭೇಟಿ ಮಾಡಿ ದೇವರ ದರ್ಶನ ಪಡೆದರು.

ವೇದಘೋಷ ಮತ್ತು ಪೂರ್ಣಕುಂಭದೊಂದಿಗೆ ಸ್ವಾಮೀಜಿಯವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸದ ಮುಜರಾಯಿ ಇಲಾಖೆ ಕ್ರಮಕ್ಕೆ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದರು.

‘ಕನಿಷ್ಠ ಕುಡಿಯುವ ನೀರು, ಯಾತ್ರಿ ನಿವಾಸ ಮತ್ತು ಬೆಟ್ಟಕ್ಕೆ ರಸ್ತೆ ಸೌಕರ್ಯ ಕಲ್ಪಿಸಬೇಕು. ಪ್ರವಾಸಿಗರು ಮತ್ತು ಭಕ್ತರ ಆಕರ್ಷಣಿಯ ತಾಣವಾಗಿಸಬೇಕು. ಕಾರ್ಯೋನ್ಮುಖರಾಗಬೇಕು’ ಎಂದು ಒತ್ತಾಯಿಸಿದರು. ಈ ಕುರಿತು ತಾವು ಸರ್ಕಾರದ ಗಮನಸೆಳೆಯುತ್ತೇನೆ ಎಂದು ಹೇಳಿದರು.

ಕಲ್ಯಾಣ ವೆಂಕಟರಮಣಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಆರ್. ರಮೇಶ್, ಹೊಸಳ್ಳಿ ಶ್ರೀನಿವಾಸ್, ಜೋಡಿ ಚಿಕ್ಕನಹಳ್ಳಿ ಶಾಂತಪ್ಪ, ಅರ್ಚಕರಾದ ಸಾಲಾದ್ರಿ ನರಸಿಂಹಮೂರ್ತಿ, ಸಂಪತ್, ವಾಸುದೇವಮೂರ್ತಿ, ಆಗಮಿಕರಾದ ಪಡುವಗೆರೆಯ ಪಿ.ಆರ್. ನಾರಾಯಣಾಚಾರ್ಯ ಅವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT