ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಿಸಲು 27 ರಿಂದ ಪಾದಯಾತ್ರೆ.

Last Updated 18 ಡಿಸೆಂಬರ್ 2018, 14:08 IST
ಅಕ್ಷರ ಗಾತ್ರ

ಹಿರಿಯೂರು: ‘ದಶಕದಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಇಂದು, ನಾಳೆ ಮುಗಿಯುತ್ತದೆ ಎಂಬ ಮಾತು ಕೇಳಿ ಸಾರ್ವಜನಿಕರು ರೋಸಿಹೋಗಿದ್ದು, ವಾಸ್ತವ ಸ್ಥಿತಿ ಅರಿಯಲು ಡಿ. 27ರಿಂದ 3 ದಿನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಮುಖಂಡ ಕಸವನಹಳ್ಳಿ ರಮೇಶ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಕಿಸಾನ್ ಸಂಘ, ತೆಂಗು ಬೆಳೆಗಾರರ ಒಕ್ಕೂಟ, ಭೂ ಹಕ್ಕುದಾರರ ವೇದಿಕೆ, ನಿಸರ್ಗವಾಣಿ ನೀರು ಬಳಕೆದಾರರ ಸಹಕಾರ ಸಂಘ, ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೀರು ಬಳಕೆದಾರರ ಸಹಕಾರ ಸಂಘದ ನೇತೃತ್ವದಲ್ಲಿ ಈ ಪಾದಯಾತ್ರೆ ಹಮ್ಮಿಕೊಂಡಿದೆ. ಡಿ. 27ರಂದು ಸಂಜೆ 6ಕ್ಕೆ ಹಿರಿಯೂರಿನಿಂದ ಹೊರಟು ಭದ್ರಾ ಜಲಾಶಯದ ಸಮೀಪ ಇರುವ ರಂಗನಾಥಸ್ವಾಮಿ ದೇವಸ್ಥಾನದ ಬಳಿ ತಂಗುವುದು. 28ರಂದು ಬೆಳಿಗ್ಗೆ 5ಕ್ಕೆ ಪಾದಯಾತ್ರೆ ಮೂಲಕ ದೊಡ್ಡ ಕುಂದೂರು–ಭದ್ರಾ ನಾಲೆ ಮೇಲ್ಭಾಗದಲ್ಲಿ ಶಾಂತಿಪುರ ಮೊದಲನೇ ಪಂಪ್‌ಹೌಸ್‌ಗೆ ಸಾಗಿ ತಂಗಲಾಗುವುದು. 29ರಂದು ದುಗ್ಗಲಾಪುರ ಗ್ರಾಮದ ಜಂಬದಳ್ಳ, ಹುಣಿಸೆಘಟ್ಟ, ಬೆಟ್ಟದ ತಾವರಕೆರೆ ಮೂಲಕ ಎರಡನೇ ಪಂಪ್ ಹೌಸ್, ಸುರಂಗ ಮಾರ್ಗ, ನರಸೀಪುರ, ರಂಗಾಪುರ, ಅಜ್ಜಂಪುರ ರೈಲ್ವೆ ನಿಲ್ದಾಣ, ಹೆಬ್ಬೂರು, ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ನಾಲಾ ಕಾಮಗಾರಿ ವಿಭಾಗವಾಗುವ ಸ್ಥಳ ಪರಿಶೀಲನೆ ನಂತರ ಹಿರಿಯೂರಿಗೆ ಬರಲಾಗುವುದು ಎಂದು ಅವರು ವಿವರಿಸಿದರು.

ಬಯಲುಸೀಮೆಯ ಜನರ ಬಹು ನಿರೀಕ್ಷಿತ ಯೋಜನೆಯಾಗಿರುವ ಇದು ರಾಜಕಾರಣಿಗಳಿಗೆ ಚುನಾವಣೆ ವಿಷಯವಾಗಿದ್ದರೆ, ಜನರಿಗೆ ಅಳಿವು–ಉಳಿವಿನ ಸಂಗತಿಯಾಗಿದೆ. 2008ರಲ್ಲಿ ನೀರಿಗಾಗಿ ನಡೆದ 542 ದಿನಗಳ ಸುದೀರ್ಘ ಹೋರಾಟದ ಫಲವಾಗಿ ಮಂಜೂರಾಗಿದ್ದ 5 ಟಿ.ಎಂ.ಸಿ. ನೀರಿನ ಹಕ್ಕೊತ್ತಾಯದ ಮುಂದುವರಿದ ಹೋರಾಟವಿದು. ಈ ಹೋರಾಟವನ್ನು ರಾಜಧಾನಿಯವರೆಗೆ ಕೊಂಡೊಯ್ಯಲಾಗುವುದು ಎಂದು ರಮೇಶ್ ಎಚ್ಚರಿಸಿದರು.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳ ಬಯಸುವವರು 3 ದಿನಕ್ಕೆ ಬೇಕಾಗುವಷ್ಟು ಬಟ್ಟೆ, ಹೊದಿಕೆ, ತಟ್ಟೆ–ಲೋಟ, ನೀರಿನ ಬಾಟಲಿ ತರಬೇಕು. ₹ 250 ಪಾವತಿಸಿ ಹೆಸರು ನೋಂದಾಯಿಸಬೇಕು ಎಂದು ರಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT