ತುಮಕೂರು: ಜಿಲ್ಲೆಯಲ್ಲಿ ಮೊಬೈಲ್ ಕಳವು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ ಒಂದೂವರೆ ವರ್ಷದಲ್ಲಿ 6,952 ಮೊಬೈಲ್ ಕಳ್ಳತನವಾಗಿದೆ. ಈ ಪೈಕಿ 1,624 ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ.
ಕಳುವಾದ ಮೊಬೈಲ್ ಪತ್ತೆಗೆ ಕೇಂದ್ರ ಸರ್ಕಾರದ ‘ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್’ (ಸಿಇಐಆರ್) ಪೋರ್ಟಲ್ ನೆರವಾಗುತ್ತಿದೆ. ಕಳ್ಳರನ್ನು ಪತ್ತೆ ಹಚ್ಚಿ ಮೊಬೈಲ್ ಮರಳಿಸುವುದು ಕಷ್ಟಕರವಾಗಿದ್ದು, ಇದಕ್ಕೆ ‘ಸಿಇಐಆರ್’ ಪೋರ್ಟಲ್ ಕೊಂಚ ವೇಗ ನೀಡಿದೆ. 2023ರ ಫೆ. 27ರಿಂದ ಈವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 6,952 ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ₹1.62 ಕೋಟಿ ಮೌಲ್ಯದ 1,624 ಮೊಬೈಲ್ ಪತ್ತೆ ಹಚ್ಚಿ ಹಿಂದಿರುಗಿಸಲಾಗಿದೆ.
ಮೊಬೈಲ್ ಕಳೆದುಕೊಂಡವರು ಠಾಣೆಗೆ ಹೋಗಿ ದೂರು ನೀಡಬೇಕಾದ ಅಗತ್ಯವಿಲ್ಲ. ಆನ್‌ಲೈನ್ ಮುಖಾಂತರ ದೂರು ಕೊಡಬಹುದು. ಮೊಬೈಲ್ ಕಳುವಾದ ತಕ್ಷಣಕ್ಕೆ ‘ಕೆಎಸ್‌ಪಿ–ಇ ಲಾಸ್ಟ್’ ಆ್ಯಪ್ ಅಥವಾ ‘ಸಿಇಐಆರ್’ ಪೋರ್ಟಲ್ ಮುಖಾಂತರ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎರಡರ ಪೈಕಿ ಒಂದರಲ್ಲಿ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಮೊಬೈಲ್ ಕಳೆದುಹೋದ, ಕಳ್ಳತನವಾದ ಕೂಡಲೇ ವೆಬ್‌ಸೈಟ್‌ನಲ್ಲಿ ಮೊಬೈಲ್‌ನ ಐಎಂಇಐ ನಂಬರ್ ಹಾಗೂ ಒಟಿಪಿ, ಅಗತ್ಯ ವಿವರ ಸಹಿತ ದೂರು ಸಲ್ಲಿಸಬೇಕು. ಅಲ್ಲಿಂದ ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ನಂತರ ಮೊಬೈಲ್ ಬ್ಲಾಕ್ ಮಾಡಲಾಗುತ್ತದೆ. ಕಳ್ಳತನ ಮಾಡಿದವರು ಮತ್ತೆ ಮೊಬೈಲ್ ಬಳಸಲು ಆರಂಭಿಸಿದ ತಕ್ಷಣ ಪೊಲೀಸರಿಗೆ ಸಿಕ್ಕಿ ಬೀಳುತ್ತಾರೆ.
‘ಮೊಬೈಲ್ ಕಳೆದು ಹೋದರೆ ಮತ್ತೆ ಸಿಗುವುದಿಲ್ಲ, ಹುಡುಕುವುದು ವ್ಯರ್ಥ’ ಎಂಬ ಭಾವನೆ ತುಂಬಾ ಜನರಲ್ಲಿ ಇದೆ. ಇದರಿಂದಾಗಿ ಹಲವರು ಪ್ರಕರಣ ದಾಖಲಿಸಲು ಮುಂದಾಗುತ್ತಿಲ್ಲ. ಇನ್ನೂ ಕೆಲವರು ಠಾಣೆಯ ತನಕ ಬಂದು ದೂರು ನೀಡಲು ಹಿಂಜರಿಯುತ್ತಾರೆ. ‘ಹೋದರೆ ಹೋಗಲಿ ಬಿಡು’ ಎಂದು ಸುಮ್ಮನಾಗುತ್ತಾರೆ. ವಾರಸುದಾರರು ಕನಿಷ್ಠ ವೆಬ್‌ಸೈಟ್ ಮೂಲಕವಾದರೂ ದೂರು ಸಲ್ಲಿಸಿದರೆ ಮೊಬೈಲ್ ಪತ್ತೆಗೆ ಸಹಾಯಕವಾಗುತ್ತದೆ. ಮೊಬೈಲ್ ಕೈತಪ್ಪಿದ ತಕ್ಷಣಕ್ಕೆ ಪೋರ್ಟಲ್, ಆ್ಯಪ್‌ನಲ್ಲಿ ಮಾಹಿತಿ ಸಲ್ಲಿಸಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
‘ರಸ್ತೆಯಲ್ಲಿ ಮೊಬೈಲ್ ಹಿಡಿದುಕೊಂಡು ಹೋಗುವಾಗ ಬೈಕ್‌ನಲ್ಲಿ ಬರುವ ಕಳ್ಳರು ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಈಚೆಗೆ ಹೆಚ್ಚಾಗುತ್ತಿವೆ. ವಾಯು ವಿಹಾರ, ಇತರೆ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗುವವರು ತುಂಬಾ ಎಚ್ಚರಿಕೆಯಿಂದ ಇರಬೇಕು. ರಸ್ತೆಯ ಪಕ್ಕದಲ್ಲೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವುದನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ಮಾಡಿದರು.
ಮೊಬೈಲ್ ಪತ್ತೆಗೆ ಸಿಇಐಆರ್ ನೆರವು ಆನ್‌ಲೈನ್ ಮೂಲಕ ದೂರು ಸಲ್ಲಿಕೆ ಅವಕಾಶ ಜಿಲ್ಲೆಯಲ್ಲಿ ಹೆಚ್ಚಿದ ಮೊಬೈಲ್ ಕಳ್ಳತನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.