ಶುಕ್ರವಾರ, ಸೆಪ್ಟೆಂಬರ್ 20, 2019
27 °C
ತಾ.ಪಂ. ಅಧ್ಯಕ್ಷ ಗಂಗಾಂಜನೇಯ ಅಧ್ಯಕ್ಷತೆಯಲ್ಲಿ ಪಿಡಿಒ, ಪಂಚಾಯಿತಿ ಅಧ್ಯಕ್ಷರ ಸಭೆ; ತಹಶೀಲ್ದಾರ ಯೋಗಾನಂದ ಹೇಳಿಕೆ

78 ಸರ್ಕಾರಿ ಶಾಲೆ ಆಸ್ತಿ ದಾಖಲೀಕರಣ ಶೀಘ್ರ

Published:
Updated:
Prajavani

ತುಮಕೂರು: ತಾಲ್ಲೂಕಿನಲ್ಲಿರುವ 78 ಸರ್ಕಾರಿ ಶಾಲೆಗಳ ಆಸ್ತಿಗೆ ಸಂಬಂಧಪಟ್ಟ ದಾಖಲೀಕರಣ ಶೀಘ್ರ ಪ್ರಾರಂಭಿಸಲಾಗುತ್ತಿದ್ದು, ಪ್ರತಿ ವಾರ ಒಂದು ಹೋಬಳಿ ವ್ಯಾಪ್ತಿಯ ಶಾಲೆಗಳ ದಾಖಲೀಕರಣ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಯೋಗಾನಂದ್ ಹೇಳಿದರು.

ಬುಧವಾರ ತಾಲ್ಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ ಗಂಗಾಂಜನೇಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಸರ್ಕಾರವೇ ಮಂಜೂರು ಮಾಡಿದ, ದಾನಿಗಳು ದೇಣಿಗೆಯಾಗಿ ನೀಡಿದ ಜಮೀನಿನಲ್ಲಿ ಹಲವಾರು ದಶಕಗಳಿಂದ ಶಾಲೆಗಳು ನಡೆಯುತ್ತಿವೆ. ಅವುಗಳಲ್ಲಿ ಈಗ ಗುರುತಿಸಿರುವಂತೆ 78 ಶಾಲೆಗಳಿಗೆ ದಾಖಲೀಕರಣ (ಆರ್.ಸಿ) ಇಲ್ಲ. ಆದಷ್ಟು ಬೇಗ ಈ ದಾಖಲೀಕರಣ ಪ್ರಕ್ರಿಯೆ ಮಾಡಿಕೊಡಲಾಗುವುದು ಎಂದು ಹೇಳಿದರು.

ತಾಲ್ಲೂಕಿನಲ್ಲಿರುವ 41 ಗ್ರಾಮ ಪಂಚಾಯತಿಗಳಲ್ಲಿ ಶಾಲಾ ಕಟ್ಟಡ, ಸ್ಮಶಾನ ಹಾಗೂ ಆಶ್ರಯ ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.

ತುಮಕೂರು ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಬೇಕು. ಶಾಲೆಗಳಿಗೆ ಅಗತ್ಯವಿರುವ ಜಾಗವನ್ನು ಗುರುತಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಜಾಗವಿಲ್ಲದೇ ಇದ್ದಲ್ಲಿ ಗೋಮಾಳಗಳನ್ನು ಗುರುತಿಸಿ ಆಶ್ರಯ ಬಡಾವಣೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸರ್ಕಾರ ಸೂಚಿಸಿದ್ದು, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಬೇಕು ಎಂದು ಪಿಡಿಒಗಳಿಗೆ ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರಂಗಸ್ವಾಮಯ್ಯ ಮಾತನಾಡಿ, ‘ಸಿರಿವರದ ವಿನಾಯಕನಗರದಲ್ಲಿ ಆಶ್ರಯ ಬಡಾವಣೆ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ಆದರೆ, ಸರ್ವೆ ಅಧಿಕಾರಿಗಳು ಹದ್ದು ಬಸ್ತ್ ಮಾಡಿಕೊಟ್ಟಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

 ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ರಮೇಶ್, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಸಭೆಯಲ್ಲಿದ್ದರು. ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Post Comments (+)