ಕುಣಿಗಲ್: ಪಟ್ಟಣದಲ್ಲಿ ಬುಧವಾರ ರಾತ್ರಿ ಪ್ರೀತಿ ನಿರಾಕರಿಸಿದ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ಯುವಕ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಸಿನಿಮಿಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಟ್ಟಣದ ಲಿಂಗತ್ವ ಅಲ್ಪಸಂಖ್ಯಾತ, ಮಂಡ್ಯದ ಯುವಕ ಆದಿಲ್ ಕಳೆದ ಆರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಕಾರ್ಯನಿಮಿತ್ತ ಹೊರ ಊರುಗಳಿಗೆ ಹೋಗುತ್ತಿದ್ದು, ಇದಕ್ಕೆ ಆದಿಲ್ ಆಕ್ಷೇಪ ವ್ಯಕ್ತಪಡಿಸಿ, ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತು, ಪ್ರೀತಿ ನಿರಾಕರಿಸಿದ್ದರು.
ಆದಿಲ್ ಮಾತನಾಡುವ ಬಯಕೆ ವ್ಯಕ್ತಪಡಿಸಿ, ಮಂಡ್ಯದಿಂದ ಬುಧವಾರ ಸಂಜೆ ಪಟ್ಟಣಕ್ಕೆ ಬಂದಿದ್ದ. ಗ್ರಾಮದೇವತಾ ವೃತ್ತದ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಸಮಾಧಾನಗೊಂಡಿದ್ದ ಆದಿಲ್, ಲಿಂಗತ್ವ ಅಲ್ಪಸಂಖ್ಯಾತನ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಪರಾರಿಯಾಗುತ್ತಿದ್ದ ಆತನನ್ನು ಪುರಸಭೆ ಸದಸ್ಯ ರಂಗಸ್ವಾಮಿ ಮತ್ತು ಬೆಂಬಲಿಗರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.