ಬುಧವಾರ, ಮೇ 18, 2022
28 °C
ದೊಡ್ಡರಂಗೇಗೌಡ ಅವರಿಗೆ ತವರು ಜಿಲ್ಲೆಯಲ್ಲಿ ಆತ್ಮೀಯ ಅಭಿನಂದನೆ; ಬಾಲ್ಯದ ನೆನಪು ಮೆಲುಕು

‘ಶಿಥಿಲಗೊಂಡ ಮಾನವೀಯ ಸಂಬಂಧ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇತ್ತೀಚಿನ ದಿನಗಳಲ್ಲಿ ಮಾನವೀಯ ಸಂಬಂಧಗಳು ಶಿಥಿಲವಾಗುತ್ತಿವೆ. ಎಲ್ಲವೂ ಮೊಬೈಲ್ ಎನ್ನುವಂತಾಗಿದೆ ಎಂದು ಹಾವೇರಿಯಲ್ಲಿ ನಡೆಯಲಿರುವ 68ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಬುಧವಾರ ಆತಂಕ ವ್ಯಕ್ತಪಡಿಸಿದರು.

ನಗರದ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಮನುಷ್ಯರ ನಡುವಿನ ಸಂಬಂಧಗಳು ಶಿಥಿಲಗೊಂಡು, ಅನೇಕ ವೈಫಲ್ಯಗಳನ್ನು ಕಾಣುವಂತಾಗಿದೆ. ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಹಲವು ತಾರತಮ್ಯಗಳನ್ನು ನೋಡುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಕವಿ ಪಂಪನ ಮಾತುಗಳನ್ನು ಗಾಳಿಗೆ ತೂರಿ, ನಾವೆಲ್ಲ ಮನುಷ್ಯರು ಎಂಬುದನ್ನು ಮರೆತು ಮೃಗೀಯ ವರ್ತನೆ ತೋರುತ್ತಿದ್ದೇವೆ. ಮಾನವೀಯ ಗುಣಗಳಿಗೆ ಗೋರಿಕಟ್ಟಿ, ಅಹಂ ಹೆಚ್ಚಿಸಿಕೊಂಡಿದ್ದು, ನಮ್ಮ ಮನೆಯವರೇ ನಮಗೆ ಪರಕೀಯರಾಗುತ್ತಿದ್ದಾರೆ. ಇದು ಅಪಾಯದ ಸಂಕೇತ ಎಂದು ಎಚ್ಚರಿಸಿದರು.

ಕೊರೊನಾ ಸಮಯದ 9 ತಿಂಗಳ ಅವಧಿಯಲ್ಲಿ 83 ಕಥೆಗಳನ್ನು ರಚಿಸಲು ಸಾಧ್ಯವಾಯಿತು. ಇದರಲ್ಲಿ ತುಮಕೂರು ಜಿಲ್ಲೆಗೆ ಸಂಬಂಧಿಸಿದ 48 ಕಥೆಗಳಿವೆ. ನಾನು ಓಡಾಡಿದ, ಕಲಿತ ಬಿಟ್ಟನಕುರಿಕೆ, ಬೆಲ್ಲದಮಡು ಸೇರಿದ ಅನೇಕ ಗ್ರಾಮಗಳನ್ನು ಒಳಗೊಂಡ ಜೀವಂತ ಚಿತ್ರಣಗಳು ಇಲ್ಲಿವೆ. ‘ಮಧ್ಯವರ್ತಿ’ ಹೆಸರಿನಲ್ಲಿ ಕಥಾ ಸಂಕಲವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು.

‘ತುಮಕೂರಿಗೆ ಬಂದರೆ ತವರು ಜಿಲ್ಲೆಗೆ ಬಂದಷ್ಟೇ ಸಂತಸ. ನನ್ನ ಮೊಟ್ಟಮೊದಲ ಕಾದಂಬರಿ ಸಿದ್ಧವಾಗಿದ್ದು ಇದೇ ನೆಲದಲ್ಲಿ. ನನ್ನ ಗುರುಗಳಾದ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ, ಪ್ರೊ.ಎಸ್.ಜಿ.ಸಿದ್ಧಲಿಂಗಯ್ಯ, ಕವಿ ಚಿಕ್ಕವೀರಯ್ಯ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರೆಲ್ಲರ ಪ್ರೀತಿಯೇ ನಾನು ಸಮಾಜಮುಖಿ ಗೀತೆಗಳನ್ನು ರಚಿಸಲು ಕಾರಣವಾಯಿತು’ ಎಂದು ನೆನಪಿಸಿಕೊಂಡರು.

ಕುಂಚಿಟಿಗ ವಿದ್ಯಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು, ‘ಮಧುಗಿರಿ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ 1946ರ ಫೆಬ್ರುವರಿ 7ರಂದು ಜನಿಸಿದ ದೊಡ್ಡರಂಗೇಗೌಡರು, ಈ ಜಿಲ್ಲೆಯ ಹೆಮ್ಮೆಯ, ಸ್ವಾಭಿಮಾನದ ಪ್ರತೀಕ. ಸಾಹಿತ್ಯ, ಗೀತೆ ರಚನೆಯ ಜೊತೆಗೆ ಬಹುಮುಖ ಪ್ರತಿಭೆ’ ಎಂದು ಬಣ್ಣಿಸಿದರು.

ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಕೆಂಪೇಗೌಡ ಸಹಕಾರ ಬ್ಯಾಂಕ್‍ ಅಧ್ಯಕ್ಷ ಪ್ರೊ.ಎಚ್‌.ಎಸ್‌.ಶೇಷಾದ್ರಿ, ಪ್ರೊ.ಚಂದ್ರಣ್ಣ, ಎಸ್.ನಾಗಣ್ಣ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು