ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿ ಕಾಮಗಾರಿ: ಎತ್ತಿನಹೊಳೆ ಮತ್ತಷ್ಟು ದೂರ?

ಭೂಸ್ವಾಧೀನ ನನೆಗುದಿಗೆ, ರೈತರಿಗೆ ಪರಿಹಾರದ್ದೇ ಚಿಂತೆ; ಆಮೆಗತಿಯಲ್ಲಿ ಕಾಮಗಾರಿ
Last Updated 24 ಅಕ್ಟೋಬರ್ 2020, 2:40 IST
ಅಕ್ಷರ ಗಾತ್ರ

ತುಮಕೂರು: ಹಣದ ಸಮಸ್ಯೆಯಿಂದ ಜಿಲ್ಲೆಯಲ್ಲಿ ಕುಂಟುತ್ತ ಸಾಗಿದ್ದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಮತ್ತು ಇತರೆ ಕಾಮಗಾರಿಗಳು ಈಗ ತೆವಳುತ್ತ ಸಾಗುವಲಕ್ಷಣಗಳು ದಟ್ಟವಾಗಿವೆ.

ಕೊರೊನಾ ಪರಿಣಾಮ ಸರ್ಕಾರಕ್ಕೆ ಆರ್ಥಿಕ ಸಂ‍ಪನ್ಮೂಲ ಕ್ರೋಡೀಕರಣ ದೊಡ್ಡ ಸವಾಲಾಗಿದೆ. ಬಿಡಿಎ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮೂಲೆ ನಿವೇಶನಗಳನ್ನು ಮಾರಾಟಮಾಡಿ ಸಂಪನ್ಮೂಲ ಸಂಗ್ರಹಿಸುತ್ತಿದೆ. ಅಂದ ಮೇಲೆ ಹಣಕಾಸು ಸ್ಥಿತಿಯನ್ನು ಅರ್ಧ ಮಾಡಿಕೊಳ್ಳಬಹುದು!

ಪರಿಸ್ಥಿತಿ ಹೀಗಿರುವಾಗ ಜಿಲ್ಲೆಯ ಎತ್ತಿನಹೊಳೆ ಯೋಜನೆಗೆ ತಾತ್ಕಾಲಿಕ ಗ್ರಹಣ ಬಡಿದಿದೆ. ಜಿಲ್ಲೆಯಲ್ಲಿ 218 ಗ್ರಾಮಗಳಲ್ಲಿ 5,900 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ.
ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲುವಿನಲ್ಲಿ ಬಫರ್ ಡ್ಯಾಂ ನಿರ್ಮಾಣಕ್ಕೆ 2 ಸಾವಿರ ಎಕರೆ ಜಮೀನು ಸ್ವಾಧೀನವಾಗಬೇಕಿದೆ.

ಭೂಸ್ವಾಧೀನಕ್ಕೆ 2,400 ಕೋಟಿ ಅಗತ್ಯವಿದೆ. ಆದರೆ ಸರ್ಕಾರ ಇಲ್ಲಿಯವರೆಗೆ ₹ 120 ಕೋಟಿ ಮಾತ್ರ ಬಿಡುಗಡೆ ಮಾಡಿದೆ! ಇದರಲ್ಲಿ ಈಗಾಗಲೇ ₹ 80 ಕೋಟಿ ಅವಾರ್ಡ್ ಆಗಿದೆ. ಈಗ ಸ್ವಾಧೀನ ಪಡಿಸಿಕೊಂಡಿರುವ ರೈತರಿಗೆ ಇನ್ನೂ ₹ 250 ಕೋಟಿ ಬಿಡುಗಡೆಗೆ ಮಾಡಬೇಕಾಗಿದೆ. ಹೀಗೆ ಭೂಸ್ವಾಧೀನಕ್ಕೆ ಹಣ ಬಿಡುಗಡೆ ಆಗದಿರುವಾಗ, ಕಾಮಗಾರಿ ವೇಗ ಪಡೆಯುವುದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ‌

ಈಗಾಗಲೇ ಜಮೀನು ಸ್ವಾಧೀನಪಡಿಸಿಕೊಂಡಿರುವ ಕಡೆ ಕಾಮಗಾರಿ ನಡೆಸಲು ಅಗತ್ಯ ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಬಹುತೇಕರು ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರಾಗಿದ್ದರು. ಲಾಕ್‌ಡೌನ್ ಸಮಯದಲ್ಲಿ ಈ ಎರಡೂ ರಾಜ್ಯಗಳ 5 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ.

ಪರಿಹಾರವಿಲ್ಲ: ಗುಬ್ಬಿ ಮತ್ತು ತುಮಕೂರು ತಾಲ್ಲೂಕಿನಲ್ಲಿ ಸ್ವಾಧೀನವಾಗಿರುವ ಜಮೀನುಗಳಿಗೆ ಪರಿಹಾರ ಕೋರಿ 2019ರ ನವೆಂಬರ್‌ನಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವ ಸಹ ಸಲ್ಲಿಸಲಾಗಿದೆ. ಆದರೆ ಪರಿಹಾರದ ಹಣ ಇನ್ನೂ ರೈತರ ಖಾತೆ ಸೇರಿಲ್ಲ.

ಸರ್ಕಾರದ ಯೋಜನೆಗಳಿಗೆ ಭೂಸ್ವಾಧೀನ ಮತ್ತು ಪರಿಹಾರ ಕಾಯ್ದೆಯ ಅನ್ವಯ ನಿಗದಿತ ಕಾಲಮಿತಿಯಲ್ಲಿ ಪರಿಹಾರಧನ ನೀಡದಿದ್ದರೆ ಪ್ರತಿ ತಿಂಗಳು ಶೇ 12ರಷ್ಟು ಬಡ್ಡಿಯೊಂದಿಗೆ ಪರಿಹಾರ ಧನ ನೀಡಬೇಕು. ಈ ರೀತಿ ವಿಳಂಬ ಮಾಡುವುದರಿಂದ ಸರ್ಕಾರಕ್ಕೆ ಮತ್ತಷ್ಟು ಹೊರೆ ಬೀಳಲಿದೆ.

ಹಣ ಬಿಡುಗಡೆಯಾಗದ ಕಾರಣ ಮಧುಗಿರಿ, ಕೊರಟಗೆರೆ, ಪಾವಗಡದಲ್ಲಿ ಭೂಸ್ವಾಧೀನವೇ ಆರಂಭವಾಗಿಲ್ಲ. ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ₹ 1,500 ಕೋಟಿಯನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟಿತ್ತು. ಈ ಹಣವನ್ನು ಭೌತಿಕ ಕಾಮಗಾರಿಗಳಿಗೆ
ಬಳಸಲಾಗುತ್ತಿದೆ.

ಈಗಾಗಲೇ ಭೂಸ್ವಾಧೀನವಾಗಿರುವ ಜಮೀನುಗಳಿಗೆ ಸರ್ಕಾರ ಯಾವಾಗ ಹಣ ನೀಡುತ್ತದೆ, ಪರಿಹಾರ ನೀಡುವ ಮುನ್ನವೇ ಜಮೀನನ್ನು ಯೋಜನೆಗೆ ಬಿಟ್ಟು ಕೊಡಬೇಕೆ, ಬಿಟ್ಟು ಕೊಟ್ಟರೆ ನಿಗದಿತ ಸಮಯದಲ್ಲಿ ಪರಿಹಾರದ ಹಣ ದೊರೆಯುವುದೇ...ಹೀಗೆ ಯೋಜನೆಯಿಂದ ಜಮೀನು ಕಳೆದುಕೊಳ್ಳುವ ರೈತರು ನಾನಾ ಜಿಜ್ಞಾಸೆಗೆ ಸಿಲುಕಿದ್ದಾರೆ.

ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ

ವಾಸ್ತವ ಒಪ್ಪಿಕೊಳ್ಳಬೇಕು. ಸರ್ಕಾರದ ಇಂದಿನ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಲಾಕ್‌ಡೌನ್‌ಗೂ ಮುನ್ನವೇ ಎತ್ತಿನಹೊಳೆ ಕಾಮಗಾರಿಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಇದಕ್ಕೆ ಪ್ರಸ್ತಾವ ಸಹ ಸಲ್ಲಿಸಲಾಗಿತ್ತು. ಆ ಹಣವೇ ಇನ್ನೂ ಬಿಡುಗಡೆಯಾಗಿಲ್ಲ. ಈಗ ಮತ್ತೆ ಕಾಮಗಾರಿ ಆರಂಭಿಸಿದರೆ ಮತ್ತಷ್ಟು ಹಣ ಅಗತ್ಯ. ನಮಗೆ ಸಂಬಳ ಕೊಡಲು ಕಷ್ಟವಾಗಿರುವಾಗ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡುತ್ತದೆ ಎನ್ನುವ ವಿಶ್ವಾಸವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT