ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೊಗಡಿಗೆ ಕನ್ನಡಿಯಾದ ಕೃತಿ

ಲೇಖಕ ಡಾ.ಓ.ನಾಗರಾಜು ಅವರ ‘ಪಲ್ಲಟ’ ಕಾದಂಬರಿ
Last Updated 21 ಡಿಸೆಂಬರ್ 2021, 3:15 IST
ಅಕ್ಷರ ಗಾತ್ರ

ತುಮಕೂರು: ಕಳೆದೆರಡು ವರ್ಷಗಳಿಂದ ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೂ ಸೋಂಕು ತಗುಲಿದ್ದು, ಮಾನವೀಯ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿಯಾದ ಅನೇಕ ಘಟನೆಗಳು ಸಂಭವಿಸಿವೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಲೇಖಕ ಡಾ.ಓ.ನಾಗರಾಜು ಅವರ ‘ಪಲ್ಲಟ’ ಕಾದಂಬರಿ, ‘ಪ್ರತಿಕ್ರಾಂತಿ’ ನಾಟಕ ಮತ್ತು ‘ಸೋಂಕು’ ಕಥಾ ಸಂಕಲನವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳು ಪಟ್ಟಣಗಳಾಗಿ ಪಲ್ಲಟಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಸ್ಥಿತ್ಯಂತರವನ್ನು ತಮ್ಮ ಕೃತಿಗಳ ಮೂಲಕ ನಾಗರಾಜು ದಾಖಲಿಸಿದ್ದಾರೆ. ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುತ್ತಾ ಸಾಮಾಜಿಕ, ಆರ್ಥಿಕ ನೆಲಗಟ್ಟಿನಲ್ಲಿ ಕೃತಿಗಳನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬದಲಾಗುತ್ತಿರುವ ಗ್ರಾಮೀಣ ಬದುಕನ್ನು ಹಿಡಿದಿಡುವುದು ನಿಜಕ್ಕೂ ಸವಾಲಿನ ಕೆಲಸ. ಗ್ರಾಮೀಣ ಸೊಗಡಿನಜೀವನಶೈಲಿ ಪರಿಚಯಿಸುವ ಕೃತಿಗಳ ದೊಡ್ಡ ಪರಂಪರೆಯೇ ಇದೆ. ಹಳ್ಳಿ ಬದುಕಿನ ಸಮೃದ್ಧಿ, ಮೌಲ್ಯಗಳ ವೈಭವೀಕರಣ, ಅವುಗಳು ನಾಶವಾಗುತ್ತಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಕೃತಿಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ವಿಮರ್ಶಕ ರವಿಕುಮಾರ್ ನೀ.ಹ., ‘ಜಾಗತೀಕರಣ,ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಜನರಲ್ಲಿ ಮೌಲ್ಯಗಳು ಪಲ್ಲಟವಾಗುತ್ತಿರುವುದನ್ನು ಕಾದಂಬರಿಯ ಹಲವು ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ. ರೋಗಗ್ರಸ್ಥ ಸಮಾಜಕ್ಕೆ ಚಿಕಿತ್ಸೆಯನ್ನು 70–80ರ ದಶಕದ ಸನ್ನಿವೇಶಗಳ ಮೂಲಕ ಕೊರಟಗೆರೆ ಮತ್ತು ಮಧುಗಿರಿ ಭಾಗದ ನೈಜ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶುದ್ಧ ಕನ್ನಡದ ಬಗ್ಗೆ ಧ್ವನಿ ಎತ್ತಿದವರಿಗೆ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

ಡಾ.ಓ.ನಾಗರಾಜು, ‘ನನ್ನ ಪ್ರೀತಿಯ ಮೇಷ್ಟ್ರು ಮೂರು ಕೃತಿಗಳನ್ನು ಬಿಡುಗಡೆಗೊಳಿಸಿ, ಧೈರ್ಯ ತುಂಬಿದ್ದಾರೆ. ಇದುನನಗೆ ಮತ್ತಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿದೆ. ಯುವ ಪೀಳಿಗೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ, ಜನರ ನಡುವೆಯೇ ಇರುವ ಜನಪರ ನಾಯಕ ಬರಗೂರು ರಾಮಚಂದ್ರಪ್ಪ’ ಎಂದು ಸ್ಮರಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಸಹಾಯಕ ಕನ್ನಡ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ಗೀತಾ ವಸಂತ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ (ಪ್ರಭಾರಿ) ವೈ.ಕೆ.ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ, ರಂಗ ಸಂಘಟಕ ಸಿದ್ದರಾಜು, ಉಪನ್ಯಾಸಕ ಶಿವನಂಜಪ್ಪ, ಲಕ್ಷ್ಮಿರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT