ಶನಿವಾರ, ಜನವರಿ 25, 2020
22 °C
ಪ್ರತಿಕಾಗೋಷ್ಠಿಯಲ್ಲಿ ಸಂಸದ ಜಿ.ಎಸ್‌.ಬಸವರಾಜು ಹೇಳಿಕೆ

ಸ್ಮಾರ್ಟ್‌ಸಿಟಿ ಅವ್ಯವಹಾರ ತಡೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ, ಅಧ್ವಾನಗಳು ಹೊಗೆಯಾಡುತ್ತಿದೆ. ಅವುಗಳಿಗೆ ತೆರೆ ಎಳೆದು ನಗರದ ಜನರಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲು ದಿಶಾ ಸಮಿತಿ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಯೋಜನೆ ಆಯ್ಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದವರಿಗೂ ಬಿಸಿ ತಟ್ಟಲಿದೆ ಎಂದು ಹೇಳಿದರು.

ಕಾಮಗಾರಿಗಳು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರವೇ ನಡೆಯಬೇಕು. ದಿಶಾ ಸಮಿತಿಯು ಯೋಜನೆಯ ಅಗತ್ಯದ ಬಗ್ಗೆ ವಿವರವಾಗಿ ಚರ್ಚಿಸಿ ಸಲಹೆ ನೀಡಬೇಕು ಅಷ್ಟೇ. ಯೋಜನೆ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಯಾರಿಗೂ ಅಧಿಕಾರ ಕೊಟ್ಟಿಲ್ಲ. ಜನರ ಅಗತ್ಯದ ಯೋಜನೆ ನಮ್ಮ ಆದ್ಯತೆ ಎಂದು ಹೇಳಿದರು.

16ರಂದು ಸಭೆ: ಸ್ಮಾರ್ಟ್‌ ಸಿಟಿಯ ಅವೈಜ್ಞಾನಿಕ ಕಾಮಗಾರಿ ಸಂಬಂಧ ಚರ್ಚಿಸಲು ಡಿ.16ರಂದು ಸಭೆ ಕರೆಯಲಾಗಿದೆ. ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಧ್ಯಕ್ಷೆ ಶಾಲಿನಿ ರಜನೀಶ್‌ ಅವರಿಗೂ ಭಾಗವಹಿಸಲು ಸೂಚಿಸಲಾಗಿದೆ. ಯಾವ ಯೋಜನೆ ಅಗತ್ಯ, ಯಾವುದು ಅನಗತ್ಯ ಎಂಬ ಬಗ್ಗೆ ಸಭೆಯಲ್ಲಿ ವರದಿ ನೀಡಲು ತಾಂತ್ರಿಕ ಸಮಿತಿಗೆ ಸೂಚಿಸಲಾಗಿದೆ ಎಂದು ಹೇಳಿದರು.

‘ಯೋಜನೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದ್ದು ಕಂಡುಬಂದಿದ್ದರೆ ಜನರು, ಪಾಲಿಕೆ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು ಡಿ.15ರೊಳಗೆ ಲಿಖಿತ ರೂಪದಲ್ಲಿ ನನ್ನ ಗಮನಕ್ಕೆ ತನ್ನಿ’ ಎಂದು ಮನವಿ ಮಾಡಿದರು. 

ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌, ಕೊಪ್ಪಳ್ ನಾಗರಾಜ್‌, ಬಿಳಿಗೆರೆ ಶಿವಕುಮಾರ್‌, ರವಿ ಗೋಷ್ಠಿಯಲ್ಲಿ ಇದ್ದರು.

‘ಆ ವಮ್ಮ ನಡೆದದ್ದೇ ದಾರಿ’

ಸ್ಮಾರ್ಟ್‌ ಸಿಟಿಯ ಅವ್ಯವಹಾರದಲ್ಲಿ ಅಧಿಕಾರಗಳು ಭಾಗಿಯಾಗಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಆ ವಮ್ಮ (ಶಾಲಿನಿ ರಜನೀಶ್‌) ನಡೆದದ್ದೇ ದಾರಿ ಆಗಿದೆ. ಪ್ರತಿಯೊಂದು ಕಾಮಗಾರಿಯೂ ಪಾರದರ್ಶಕವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜು ಹೇಳಿದರು.

‘ಕಥೆ ಹೇಳಿದರೆ ಕೇಳಿ ಸುಮ್ಮನಾಗುವ ಎಂಪಿ ನಾನಲ್ಲ. ನನಗೆ ಓಬಿರಾಯನ ಕಾಲದ ಲೆಕ್ಕವೂ ಗೊತ್ತು. ಡಿಜಿಟಲ್‌ ಇಂಡಿಯಾವೂ ಗೊತ್ತು. ನನ್ನ ಯಾಮಾರಿಸಲು ಸಾಧ್ಯವಿಲ್ಲ’ ಎಂದರು.

ಟೆಕ್ನಾಲಜಿ ಕೇಂದ್ರಕ್ಕೆ ಪ್ರಸ್ತಾವ

ತುಮಕೂರಿನ ಅಮಲಾಪುರದ ಬಳಿ ಸುಮಾರು ₹ 100 ಕೋಟಿ ವೆಚ್ಚದ ಎಂಎಸ್‌ಎಂಇ ಟೆಕ್ನಾಲಜಿ ಕೇಂದ್ರ ಸ್ಥಾಪಿಸಲು ಈ ಹಿಂದೆ ಸಂಸದನಾಗಿದ್ದಾಗ ಪ್ರಸ್ತಾವ ಸಲ್ಲಿಸಿದ್ದೆ. ಈ ಬಗ್ಗೆ ಈಚೆಗೆ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆಯ ಮಾದರಿ ಪ್ರದರ್ಶನ ಮಾಡಲಾಗಿತ್ತು ಅಷ್ಟೆ. ಅದನ್ನೇ ತಪ್ಪು ಗ್ರಹಿಕೆಯಿಂದ ಯೋಜನೆಗೆ ₹ 100 ಕೋಟಿ ಮಂಜೂರು ಆಗಿದೆ ಎಂದು ಅವರ ಹೇಳಿಕೆ ರೀತಿ ಮಾಹಿತಿ ರವಾನೆಯಾಗಿದೆ. ಯೋಜನೆ ಬಗ್ಗೆ ವಿವರವಾದ ಪರಿಕಲ್ಪನಾ ಪ್ರಸ್ತಾವ ಸಲ್ಲಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)