ಸೋಮವಾರ, ಮೇ 10, 2021
26 °C
ತುರುವೇಕೆರೆ ತಾಲ್ಲೂಕು ಕೇಂದ್ರೀಕರಿಸಿದ ಪೊಲೀಸರು: ಐಜಿಪಿ

ರಾಜಕೀಯ ಘರ್ಷಣೆ ತಡೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುರುವೇಕೆರೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ರಾಜಕೀಯ ಘರ್ಷಣೆ ತಡೆಗಟ್ಟಲು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಇಲ್ಲಿ ಶುಕ್ರವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ ನೀಡಲಾಗಿದೆ. ತುಮಕೂರು ಗ್ರಾಮಾಂತರದಲ್ಲಿ ರಾಜಕೀಯ ಘರ್ಷಣೆಗಳು ನಡೆಯುವ ಬಗ್ಗೆ ಎಚ್ಚರ ವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಗೂಂಡಾ ವರ್ತನೆ ತೋರುವವರು, ಮಟ್ಕಾ ಕಿಂಗ್‌ಪಿನ್‌ಗಳು, ಸಂಘಟಿತ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಬಂಧಿಸಿ, ಅಂತಹವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈಗ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದವರು ಇನ್ನುಮುಂದೆ ಅಂತಹ ಕೆಲಸಬಿಟ್ಟು ತಮ್ಮ ಪಾಡಿಗೆ ತಾವು ಬದುಕಿದರೆ ಏನು ಮಾಡುವುದಿಲ್ಲ. ಮತ್ತೆ ಮುಂದುವರಿಸಿದರೆ ತಕ್ಕ ಶಾಸ್ತಿ ಮಾಡಲಾಗುವುದು’ ಎಂದರು.

ಸೈಬರ್ ಅಪರಾಧಗಳ ತನಿಖೆ, ಮಾದಕ ದ್ರವ್ಯಗಳ ಮಾರಾಟ ತಡೆಗಟ್ಟುವುದು, ಅಪರಾಧಗಳು ಸಂಭವಿಸಿದ ಸಮಯದಲ್ಲಿ ಸಾಕ್ಷಾಧಾರಗಳ ಸಂರಕ್ಷಣೆ, ತನಿಖೆ ನಡೆಸುವ ಹೊಸ ಮಾರ್ಗಗಳು, ಸಾರ್ವಜನಿಕರ ಜತೆ ಯಾವರೀತಿ ವರ್ತಿಸಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸಭೆಯಲ್ಲಿ ಮಾರ್ಗದರ್ಶನ ಮಾಡಲಾಯಿತು ಎಂದು ಅವರು ವಿವರಿಸಿದರು.

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ನಿಯಮ ಪಾಲನೆ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದನ್ನು ತಗ್ಗಿಸಲು ಕ್ರಮ ವಹಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಸಿ.ಸಿ ಟಿ.ವಿ ಅಳವಡಿಸಿ ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಾಹನ ನಿಲುಗಡೆ ನಿಷೇಧಿತ ಪ್ರದೇಶದಿಂದ ಟೋಯಿಂಗ್ ಕಡಿಮೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ತಿಳಿಸಿದರು.

ಪ್ರತಿ ವರ್ಷವೂ ಪೊಲೀಸರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟು ಪ್ರಮಾಣದಲ್ಲಿ ತಗ್ಗಲಿದೆ. ಪ್ರಸ್ತುತ ಕೋವಿಡ್‌ನಿಂದಾಗಿ ನೇಮಕಾತಿ ಪ್ರಕ್ರಿಯೆಗಳು ತಡವಾಗಿವೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.