ಆಧಾರ್ ಕಾರ್ಡ್ ಪಡೆಯಲು ನೂಕು ನುಗ್ಗಲು

ಗುರುವಾರ , ಜೂನ್ 20, 2019
24 °C
ಕೊಡಿಗೇನಹಳ್ಳಿ; ನಿತ್ಯ ಸರತಿ ಸಾಲಿನಲ್ಲಿ ನಿಂತವರ ಗೋಳು ಕೇಳುವವರ್ಯಾರು

ಆಧಾರ್ ಕಾರ್ಡ್ ಪಡೆಯಲು ನೂಕು ನುಗ್ಗಲು

Published:
Updated:
Prajavani

ಕೊಡಿಗೇನಹಳ್ಳಿ (ಮಧುಗಿರಿ): ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಪಡೆಯಲು ಪ್ರತಿದಿನ ನೂಕು- ನುಗ್ಗಲು. ಸರತಿ ಸಾಲಿನಲ್ಲಿ ನಿಂತು ಮಕ್ಕಳು ಮತ್ತು ತಾಯಂದಿರು ಹೈರಾಣಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಕೊಡಿಗೇನಹಳ್ಳಿ ಸುಮಾರು 50ಕ್ಕಿಂತ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೊಡ್ಡ ಹೋಬಳಿ. ನಾಡಕಚೇರಿಯಲ್ಲಿ ಪಹಣಿ, ಜಾತಿ, ಆದಾಯ, ವಂಶವೃಕ್ಷ ಮತ್ತು ಆಧಾರ್ ಕಾರ್ಡ್ ಇವುಗಳೆಲ್ಲವನ್ನು ಒಬ್ಬ ಕಂಪ್ಯೂಟರ್ ಆಪರೇಟರ್ ನೀಡಬೇಕಾದ ಕಾರಣ ಇಲ್ಲಿನ ಜನರಿಗೆ ತೊಂದರೆಯಾಗುತ್ತಿದೆ.

ಆದ್ದರಿಂದ ಮತ್ತೊಬ್ಬ ಕಂಪ್ಯೂಟರ್ ಆಪರೇಟರ್‌ ನೇಮಿಸಿ. ಇಲ್ಲವೇ, ಆಯಾ ಗ್ರಾಮ ಪಂಚಾಯಿತಿಗಳಲ್ಲೇ ದಾಖಲೆಗಳನ್ನು ನೀಡಲು ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಅನೇಕ ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೂನ್ ತಿಂಗಳಾಗಿರುವುದರಿಂದ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ರೈತರು ವಿವಿಧ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಪಡೆಯಲು ಹೆಚ್ಚಿನ ಜನರು ಸೇರುತ್ತಿದ್ದಾರೆ. ಆದರೆ, ನಾಡಕಚೇರಿಯಲ್ಲಿ ಪ್ರತಿ ಗುರುವಾರ, ಶನಿವಾರ ಹಾಗೂ ಮಂಗಳವಾರ ಮಾತ್ರ ಆಧಾರ್ ಕಾರ್ಡ್ ಮಾಡುವುದರಿಂದ ಸರತಿ ಸಾಲಿನಲ್ಲಿ ನೂರಾರು ಜನರು ನಿಲ್ಲುತ್ತಾರೆ. 

‘ನಿಗದಿಯಂತೆ ಮಧ್ಯಾಹ್ನದ ಮೇಲೆ ಆಧಾರ್ ಕಾರ್ಡ್ ತೆಗೆದರೂ ಹೋಬಳಿಯ ಜನರು ಅಂದು ಬೆಳಿಗ್ಗೆ 8ರಿಂದ 9 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ, ಇಲ್ಲಿ ಸರ್ವರ್ ಬ್ಯುಸಿ ಅಥವಾ ಕೆಲ ಕಾರಣಗಳಿಂದ ದಿನಕ್ಕೆ ಕೇವಲ 12ರಿಂದ 15 ಜನರ ಕಾರ್ಡ್ ಮಾಡಲಾಗುತ್ತದೆ. ಮಿಕ್ಕವರು ಇಲ್ಲಿನ ವ್ಯವಸ್ಥೆಯನ್ನು ಶಪಿಸುತ್ತ ವಾಪಸಾಗುತ್ತಾರೆ’ ಎಂದು ಪರ್ತಿಹಳ್ಳಿ ಗ್ರಾಮದ ರಾಜಗೋಪಾಲರೆಡ್ಡಿ ಆರೋಪಿಸಿದರು.

ಗುರುವಾರ ಮಧ್ಯಾಹ್ನ ಆಧಾರ್ ಕಾರ್ಡ್ ಪಡೆಯಲು ನಾಡಕಚೇರಿ ಮುಂದೆ ನೆರೆದಿದ್ದ ಸುಮಾರು 100ಕ್ಕಿಂತ ಹೆಚ್ಚಿನ ಜನರನ್ನು ನಿಯಂತ್ರಿಸಲು ಉಪತಹಶೀಲ್ದಾರ್ ನಾಗರಾಜು ಮುಂದಾದಾಗ ಸಾರ್ವಜನಿಕರು ಅವರನ್ನು, ‘ದಿನ ಎಷ್ಟು ಜನಕ್ಕೆ ಸಾಧ್ಯವಾಗುತ್ತೋ ಅಷ್ಟು ಜನಕ್ಕೆ ಮಾತ್ರ ಟೋಕನ್ ನೀಡಬೇಕು. ಅದು ಬಿಟ್ಟು ಹೋಬಳಿಯ ಎಲ್ಲ ಜನರನ್ನು ಕೂಡಿ ಹಾಕಿಕೊಂಡು ಹಿಂಸೆ ನೀಡುತ್ತಿದ್ದೀರಾ’ ಎಂದು ತರಾಟೆ ತೆಗೆದುಕೊಂಡರು.

ಆಗ ಕೆಲ ಸಾರ್ವಜನಿಕರಿಗೂ ಮತ್ತು ಉಪತಹಶೀಲ್ದಾರ್‌ಗೂ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಸಂಬಂಧಿಸಿದವರು ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದರೆ ನಾಡಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

**

 ನನ್ನ ಮಗನಿಗೆ ಆಧಾರ್ ಕಾರ್ಡ್ ಮಾಡಿಸಲು ಕಂಕಳಲ್ಲಿ ಮಗು ಎತ್ತಿಕೊಂಡು 20 ದಿನಗಳಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದೇನೆ. ಸಂಬಂಧಿಸಿದವರಿಗೆ ಮಾತೃ ಹೃದಯವಿರದೆ ಕಲ್ಲು ಹೃದಯವಿದೆಯೋ ತಿಳಿಯುತ್ತಿಲ್ಲ.
-ಶ್ವೇತಾ, ಕಡಗತ್ತೂರು

*

ಗ್ರಾಮ ಪಂಚಾಯಿತಿಗಳಲ್ಲಿ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಇರುವುದರಿಂದ ಅಮಾಯಕ ಜನರನ್ನು ನಾಡಕಚೇರಿಗೆ ಅಲೆಸುವ ಬದಲು ಆಯಾ ಗ್ರಾಮ ಪಂಚಾಯಿತಿಗಳಲ್ಲೇ ಅಗತ್ಯ ದಾಖಲೆಗಳನ್ನು ವಿತರಿಸಲಿ.
-ಎಸ್.ಶಿವಕುಮಾರ್, ವಿದ್ಯಾರ್ಥಿ, ಮುತ್ತರಾಯನಹಳ್ಳಿ

*

ನಾಳೆಯಿಂದಲೇ ಪ್ರತಿದಿನ 50 ಜನರಿಗೆ ಆಧಾರ್ ಕಾರ್ಡ್ ತೆಗೆಯಲು ಹಾಗೂ ಮುಂಚೆಯೆ ಟೋಕನ್ ವ್ಯವಸ್ಥೆ ಕಲ್ಪಿಸಲು ಉಪತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ
-ಎಲ್.ಎನ್.ನಂದೀಶ್, ಮಧುಗಿರಿ ತಹಶೀಲ್ದಾರ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !