ಸೋಮವಾರ, ಏಪ್ರಿಲ್ 19, 2021
24 °C
ಪರಿಹಾರ ಕಾಣದ ಆಧಾರ್ ಸಮಸ್ಯೆ: ಸಾರ್ವಜನಿಕರಲ್ಲಿ ಇನ್ನಿಲ್ಲದ ತಳಮಳ

ಆಧಾರ್‌ ಸಮಸ್ಯೆ ಸರಿಪಡಿಸಿಕೊಳ್ಳಲು ಕತ್ತಲಲ್ಲೇ ಅಂಚೆ ಕಚೇರಿ ಮುಂದೆ ಠಿಕಾಣಿ

ಆರ್‌.ಸಿ. ಮಹೇಶ್ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಆಧಾರ್ ಕಾರ್ಡ್ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾರ್ವಜನಿಕರು ಪಡಿಪಾಟಲು ಪಡುತ್ತಿದ್ದು ಪಟ್ಟಣದ ಅಂಚೆ ಕಚೇರಿ ಮತ್ತು ನಾಡಕಚೇರಿಗಳ ಮುಂದೆ ಕತ್ತಲನ್ನು ಲೆಕ್ಕಿಸದೆ ಬೆಳಗಿನಜಾವದಿಂದಲೇ ಟೋಕನ್‌ ಪಡೆಯಲು ಠಿಕಾಣಿ ಹೂಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಆಧಾರ್ ಗೊಂದಲ ಪದೇ ಪದೇ ಜನರನ್ನು ಕಾಡುತ್ತಿದೆ. ಸರ್ಕಾರದ ಯಾವುದೇ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಅತ್ಯವಶ್ಯಕ. ಆದರೆ, ಸರ್ಕಾರದ ಗೊಂದಲದ ನಡೆಯಿಂದ ಜನರು ರೋಸಿ ಹೋಗಿದ್ದಾರೆ.

ಆರಂಭದ ಹಂತದಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಮನೆ ವಿಳಾಸಕ್ಕೆ ಬರುತ್ತಿತ್ತು. ನಂತರದ ದಿನಗಳಲ್ಲಿ ಖಾಸಗಿಯಾಗಿ ಆಧಾರ್ ಕಾರ್ಡ್ ಪಡೆಯುವಾಗ ಅಂತಹ ದೊಡ್ಡ ಸಮಸ್ಯೆ ಕಾಡಿರಲಿಲ್ಲ. ಆದರೆ, ಪ್ರಸ್ತುತ ಸರ್ಕಾರ ಗೊತ್ತುಪಡಿಸಿದ ಕೆಲವೇ ಕಡೆಗಳಲ್ಲಿ ಆಧಾರ್ ಪಡೆಯುವ ಅಥವಾ ಬದಲಾವಣೆಗೆ ಅವಕಾಶ ನೀಡಿದ ಮೇಲೆ ಸಮಸ್ಯೆ ಉಲ್ಬಣಗೊಂಡಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕೆಲವೇ ಕೆಲವು ಕಡೆ ಆಧಾರ್ ಕಾರ್ಡ್ ತೆಗೆಯುವ ಅವಕಾಶ ಕಲ್ಪಿಸಲಾಗಿತ್ತು. ಮೊದಲು ಯಳನಡು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಮಾತ್ರ ಮಾಡಲಾಗುತ್ತಿತ್ತು. ನಸುಕಿನಲ್ಲಿ ಪೋಷಕರ ಜತೆ ಆಧಾರ್ ಪಡೆಯಲು ಹೋಗಿದ್ದ ಬಳ್ಳೆಕಟ್ಟೆ ಗ್ರಾಮದ ವಿದ್ಯಾರ್ಥಿಯೊಬ್ಬ ಶೌಚಕ್ಕೆ ತೆರಳಿದ್ದ ಸಮಯದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆಯ ನಂತರ ಹುಳಿಯಾರಿನ ನಾಡಕಚೇರಿ ಹಾಗೂ ಅಂಚೆ ಕಚೇರಿಯಲ್ಲಿ ಆಧಾರ್‌ ಸೇವೆ ಆರಂಭವಾಯಿತು.

ಈ ಎರಡೂ ಕೇಂದ್ರಗಳಲ್ಲಿ ಸೋಮವಾರ ವಾರಕ್ಕೆ ಆಗುವಷ್ಟು ಟೋಕನ್‌ಗಳನ್ನು ನೀಡಲಾಗುತ್ತದೆ. ಜನ್ಮ ದಿನಾಂಕ, ವಯೋಮಿತಿ, ಹೆಸರು ತಿದ್ದುಪಡಿಗಾಗಿ ಜನರ ಸಂಖ್ಯೆ ಹೆಚ್ಚಿದೆ. ಅಗತ್ಯವಾಗಿ ಆಧಾರ್ ಬೇಕಾಗಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ಹುಳಿಯಾರು ದೊಡ್ಡ ಹೋಬಳಿ ಆಗಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಮತ್ತೊಂದು ಕಡೆ ತೆಗೆಯಲು ಅವಕಾಶ ಮಾಡಿಕೊಂಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಪ್ರತಿ ಸೋಮವಾರ ಟೋಕನ್‌ ನೀಡುತ್ತಾರೆ. ಆದರೆ, ರಾತ್ರಿಯೆಲ್ಲಾ ಕಾದು ಕುಳಿತರೇ ಬೆಳಿಗ್ಗೆ ಟೋಕನ್‌ ಸಿಗುವುದೇ ದುರ್ಲಭವಾಗಿದೆ. ಆಧಾರ್‌ನಲ್ಲಿ ಒಮ್ಮೆಗೆ ಎಲ್ಲವನ್ನೂ ಸರಿಪಡಿಸದ ಕಾರಣ ಮತ್ತೆ ಮತ್ತೆ ಕೇಂದ್ರಗಳಿಗೆ ಎಡತಾಕುವ ಪರಿಸ್ಥಿತಿ ಇದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಆಧಾರ್ ಪಡೆಯಲು, ತಿದ್ದುಪಡಿ ಮಾಡಿಸಲು ಶಾಲೆ ಬಿಟ್ಟು ಮಕ್ಕಳನ್ನು ಕರೆತರುತ್ತಾರೆ. ಆದರೆ, ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗತ್ತಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸಬೇಕು’ ಎಂದು ನಾಗಪ್ಪನಕಟ್ಟೆ ಶಿವಣ್ಣ ಒತ್ತಾಯಿಸುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು