ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿವಿಯಿಂದ ಸೀನಪ್ಪನಹಳ್ಳಿ ಕಾಲೊನಿ ದತ್ತು

ಅಲೆಮಾರಿ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ
Last Updated 21 ಸೆಪ್ಟೆಂಬರ್ 2020, 1:45 IST
ಅಕ್ಷರ ಗಾತ್ರ

ತುಮಕೂರು: ಸೀನಪ್ಪನಹಳ್ಳಿ ಜನತಾ ಕಾಲೊನಿ ಗ್ರಾಮವನ್ನು ತುಮಕೂರು ವಿಶ್ವವಿದ್ಯಾಲಯವು ದತ್ತು ತೆಗೆದುಕೊಳ್ಳಲಿದೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ತುಮಕೂರಿನ ಮಮತೆ ಟ್ರಸ್ಟ್, ಕರ್ನಾಟಕ ರಾಜ್ಯ ಮಹಿಳಾ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಮಹಾಸಭಾ ಹಾಗೂ ಬೆಂಗಳೂರಿನ ಲೋಹಿತ್.ಎಚ್.ಆರ್. ಸರ್ವೀಸ್ ಸಂಸ್ಥೆಯು ತಾಲ್ಲೂಕಿನ ನಾಗವಲ್ಲಿಯ ಸೀನಪ್ಪನಹಳ್ಳಿ ಜನತಾ ಕಾಲೊನಿಯಲ್ಲಿ ಭಾನುವಾರ ಆಯೋಜಿಸಿದ್ದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವವಿದ್ಯಾಲಯಕ್ಕಾಗಿ ಬಿದರಕಟ್ಟೆ ಬಳಿ ನಿರ್ಮಾಣಗೊಳ್ಳುತ್ತಿರುವ ಕ್ಯಾಂಪಸ್‌ ಸುತ್ತಮುತ್ತಲಿನ 8 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಇದರ ಜತೆಗೆ ಸೀನಪ್ಪನಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಪ್ರಾಧ್ಯಾಪಕ ಡಾ.ಓ.ನಾಗರಾಜು ಮಾತನಾಡಿ, ‘ಸಾಮಾಜಿಕ ಅಸಮಾನತೆಯಿಂದ ಪ್ರಬಲರೇ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಲೆಮಾರಿಗಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೆಲವೇ ಜನರ ಕೈಯಲ್ಲಿ ದೇಶದ ಸಂಪತ್ತು ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು, ‘ಅಲೆಮಾರಿ ಸಮುದಾಯದ ಪ್ರಗತಿಗೆ ಸರ್ಕಾರದಿಂದ ಹಾಗೂ ಖಾಸಗಿಯಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಅಲೆಮಾರಿಗಳು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು’ ಎಂದರು.

ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಡಿ.ಜಿ.ಶೇಖರ್, ‘ಸಮಾಜದಲ್ಲಿ ಸೌಲಭ್ಯದಿಂದ ವಂಚಿತರಾಗಿ ಹಿಂದುಳಿದವರಿಗೆ ಮುಂದೆ ಬರುವ ಮಾರ್ಗ ಶಿಕ್ಷಣ. ವರ್ಗ ಹಾಗೂ ಜಾತಿ ಸೃಷ್ಟಿಸಿದ ಅಮಾನತೆಯಿಂದ ಅಲೆಮಾರಿಗಳು ಸೌಲಭ್ಯಗಳಿಗಾಗಿ ಹೋರಾಡಬೇಕಿದೆ’ ಎಂದು ಹೇಳಿದರು.

ರಾಜ್ಯ ಮಹಿಳಾ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಮಹಾಸಭಾ ಅಧ್ಯಕ್ಷೆ ರಾಮಕ್ಕ, ಮಮತೆ ಟ್ರಸ್ಟ್‌ನ ಮಮತಾ, ಮನು,ಲೋಹಿತ್.ಎಚ್.ಆರ್ ಸರ್ವೀಸ್ ಕಂಪೆನಿಯ ಮುಕ್ತಾಂಬ ಇದ್ದರು.

ಅಲೆಮಾರಿಗಳಿಗೆ ನಿವೇಶನ

‘ಅಲೆಮಾರಿಗಳಿಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತವಾಗಿ ಒಂದೆಡೆ ನೆಲೆನಿಂತು ಜೀವನ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ. ಅಲೆಮಾರಿ ಸಮುದಾಯಗಳಿಗೆ ನಿವೇಶನ ನೀಡುವ ಸಂಬಂಧ ಜಿಲ್ಲಾಧಿಕಾರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಮುಂದಿನ ಆರೇಳು ತಿಂಗಳಲ್ಲಿ ಅಲೆಮಾರಿಗಳಿಗೆ ನಿವೇಶನ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಂಗೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT